ವಿದೇಶದಿಂದ ಜಿರಾಫೆ ಮಲ ತಂದು ಏರ್​ಪೋರ್ಟಿನಲ್ಲಿ ಸಿಕ್ಕಿಬಿದ್ದ ಮಹಿಳೆ; ಕಾರಣ ಕೇಳಿ ಅಧಿಕಾರಿಗಳೇ ಶಾಕ್

Giraffe Poop
Published on

ನವದೆಹಲಿ: ವಿಚಿತ್ರ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಜಿರಾಫೆಯ ಮಲವನ್ನು ತಂದು ಕಸ್ಟಮ್ಸ್ ಅಧಿಕಾರಿಗಳಿಗೆ ದಂಡ ಕಟ್ಟಿರುವ ಘಟನೆ ಅಮೆರಿಕದ ಮಿನ್ನಿಯಾಪೊಲಿಸ್ ನಗರದ ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮಹಿಳೆಯನ್ನು ವಿಚಾರಣೆ ಒಳಪಡಿಸಿದಾಗ ಆಕೆ ಹೇಳಿದ ವಿಚಾರ ಕೇಳಿ ಅಧಿಕಾರಿಗಳು ದಂಗಾಗಿದ್ದು, ಹೀಗೂ ಮಾಡಬಹುದಾ ಎಂದು ಹಲವರು ಪ್ರಶ್ನಿಸಿದ್ದಾರೆ. ಸೆಪ್ಟೆಂಬರ್ 29 ರಂದು ನಡೆದ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣದ ಹಿನ್ನಲೆ

ಅಮೆರಿಕದ ಮಿನ್ನಿಯಾಪೊಲಿಸ್ ನಗರದ ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮಹಿಳೆಯೊಬ್ಬರ ಲಗೇಜ್ ಪರಿಶೀಲನೆ ನಡೆಸಿದ ವೇಳೆ ಆಕೆಯ ಬ್ಯಾಗ್‌ನಲ್ಲಿ ಜಿರಾಫೆಯ ಮಲ ಪತ್ತೆಯಾಗಿದೆ. ಕೂಡಲೇ ಮಹಿಳೆಯನ್ನು ವಶಕ್ಕೆ ಪಡೆದ ಅಧಿಕಾರಿಗಳು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಚಾರಣೆ ವೇಳೆ ಆಕೆ ಪೂರ್ವ ಆಫ್ರಿಕಾ ದೇಶವಾದ ಕೀನ್ಯಾದಿಂದ ಜಿರಾಫೆಯ ಮಲವನ್ನು ತಂದಿರುವುದಾಗಿ ಹೇಳಿದ್ದಾರೆ. ನೆಕ್ಲೆಸ್ ಮಾಡಿಕೊಳ್ಳಲು ಜಿರಾಫೆಯ ಮಲವನ್ನು ತಂದಿದ್ದಾಗಿ ಮಹಿಳೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಈ ಹಿಂದೆ ಕೂಡಾ ತಾವು ಕಡವೆಯ ಮಲವನ್ನು ಸಂಗ್ರಹಿಸಿ ತಂದು ಅದರಲ್ಲಿ ಆಭರಣ ಮಾಡಿದ್ದಾಗಿ ಮಹಿಳೆ ವಿಚಾರಣೆ ವೇಳೆ ಹೇಳಿದ್ದಾರೆ.

ಸಮಸ್ಯೆಗಳಿಗೆ ಕಾರಣ ಆಗಬಹುದು

ಈ ಕುರಿತು ಪ್ರತಿಕ್ರಿಯಿಸಿರುವ ಕಸ್ಟಮ್ಸ್​ನ ಹಿರಿಯ ಅಧಿಕಾರಿಯೊಬ್ಬರು ಆಕೆ ಕೀನ್ಯಾದಿಂದ ಹೊತ್ತು ತಂದ ಜಿರಾಫೆ ಮಲವನ್ನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಕೀನ್ಯಾಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ನಾನು ಜಿರಾಫೆಗಳ ಮಲವನ್ನು ಸಂಗ್ರಹಿಸಿ ತಂದಿರುವುದಾಗಿ ಸುಂಕ ಅಧಿಕಾರಿಗಳ ವಿಚಾರಣೆ ವೇಳೆ ಮಹಿಳೆ ಹೇಳಿದ್ದಾರೆ. ಈ ಮಲದಿಂದ ಆಭರಣ ತಯಾರಿಕೆ ಮಾಡುತ್ತೇನೆ ಎಂದು ಮಹಿಳೆ ಹೇಳಿದ್ದಾರೆ.

ಅಮೆರಿಕದ ಕೃಷಿ ಇಲಾಖೆ ಅಧಿಕಾರಿಗಳು ಮಹಿಳೆ ತಂದ ಜಿರಾಫೆ ಮಲವನ್ನು ಪರಿಶೀಲಿಸಿ ಅದನ್ನು ಕ್ರಿಮಿನಾಶಕ ಬಳಸಿ ಈಗಾಗಲೇ ಅದನ್ನು ನಾಶ ಮಾಡಿದ್ದಾರೆ. ಈ ರೀತಿಯ ವಸ್ತುಗಳನ್ನು ಬೇರೆ ದೇಶ, ಬೇರೆ ಖಂಡಗಳಿಂದ ಅಮೆರಿಕ ದೇಶಕ್ಕೆ ತರೋದು ಅಪಾಯಕಾರಿ. ಈ ರೀತಿಯ ವಸ್ತುಗಳು ನನ್ನಲ್ಲಿ ಇವೆ ಎಂದು ಮೊದಲೇ ಘೋಷಣೆ ಮಾಡದೆ ಅಮೆರಿಕ ದೇಶವನ್ನು ಪ್ರವೇಶ ಮಾಡೋದು ಕೂಡಾ ಅಪರಾಧ.

ಈ ರೀತಿಯ ವಸ್ತುಗಳನ್ನು ಮುಟ್ಟುವ, ಸಂಗ್ರಹಿಸುವ ಹಾಗೂ ತನ್ನ ಜೊತೆ ತರುವ ವೇಳೆ ಹಲವು ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇನ್ನು ಈ ವಸ್ತುಗಳನ್ನು ಬಳಸಿಕೊಂಡು ಆಭರಣ ತಯಾರಿಕೆ ಮಾಡೋದು, ಅದನ್ನು ಬಳಸೋದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಗಬಹುದು ಎಂದು ಕಸ್ಟಮ್ಸ್​ನ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net