

ಭೋಪಾಲ್: ಗಂಡ ಕೆಲಸದಿಂದ ಲೇಟಾಗಿ ಮನೆಗೆ ಬಂದ ಎನ್ನುವ ಕ್ಷುಲ್ಲಕ ಕಾರಣಕ್ಕೆ ಹೆಂಡತಿ ಆತನ ಮುಖದ ಮೇಲೆ ಬಿಸಿ ಎಣ್ಣೆ ಸುರಿದು, ಗಾಯಗೊಳಿಸಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.
35 ವರ್ಷದ ಶಿವಕುಮಾರಿ ಅಹಿರ್ವಾರ್ ಗಂಡ ಅರವಿಂದ್ ಅಹಿರ್ವಾರ್(38) ಜತೆ ಸಾಗರದಲ್ಲಿ ಬದುಕುತ್ತಿದ್ದಳು. ಅರವಿಂದ್ ದೈನಂದಿನ ಸಂಬಳಕ್ಕೆ ದುಡಿಯುವ ಕೂಲಿ ಕಾರ್ಮಿಕನಾಗಿದ್ದ. ಕೆಲಸದ ಒತ್ತಡದಿಂದಾಗಿ ಆತ ಕೆಲವು ದಿನ ಮನೆಗೆ ಲೇಟಾಗಿ ಬರುತ್ತಿದ್ದನಂತೆ. ಆಗೆಲ್ಲ ಶಿವಕುಮಾರಿ ಅವನೊಂದಿಗೆ ಜಗಳವಾಡುತ್ತಿದ್ದಳಂತೆ.
ಇತ್ತೀಚೆಗೆ ಒಂದು ದಿನ ಅರವಿಂದ್ ಲೇಟಾಗಿ ಮನೆಗೆ ಬಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಶಿವಕುಮಾರಿ, ಗಂಡನೊಂದಿಗೆ ಜಗಳವಾಡಿದ್ದಾಳೆ. ಇಬ್ಬರ ಜಗಳ ತಾರಕಕ್ಕೇರುವಷ್ಟರಲ್ಲಿ ಕುಟುಂಬಸ್ಥರು ಮಧ್ಯೆ ಪ್ರವೇಶಿಸಿದ್ದು, ಜಗಳ ನಿಲ್ಲಿಸಿದ್ದಾರೆ. ಜಗಳ ನಿಲ್ಲಿಸಿ ಎಲ್ಲರೂ ನಿದ್ರೆ ಮಾಡಿದ್ದಾರೆ. ಆದರೆ ಶಿವಕುಮಾರಿಗೆ ಸಿಟ್ಟು ಕರಗಿಲ್ಲ. ಬೆಳಗ್ಗೆ 5 ಗಂಟೆ ಸಮಯಕ್ಕೆ ಎದ್ದು ಸಿಟ್ಟಿನಿಂದ ಗಂಡನ ಮುಖದ ಮೇಲೆ ಬಿಸಿ ಎಣ್ಣೆ ಸುರಿದಿದ್ದಾಳೆ. ಸುಡುತ್ತಿದ್ದ ಎಣ್ಣೆಯಿಂದಾಗಿ ಅರವಿಂದ್ ಮುಖ ಸುಟ್ಟಿದ್ದು, ಆತ ಚೀರಿಕೊಂಡಿದ್ದಾನೆ. ಅರವಿಂದ್ ಕೂಗಿಕೊಳ್ಳುವುದನ್ನು ಕೇಳಿಸಿಕೊಂಡ ಕುಟುಂಬಸ್ಥರು, ಅವನ ರೂಮಿಗೆ ಬಂದಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಕುಮಾರಿಯ ವಿರುದ್ಧ ಕುಟುಂಬ ದೂರು ದಾಖಲಿಸಿದೆ. ಸಿಟ್ಟಿನಿಂದಾಗಿ ನಾನು ತಪ್ಪು ಮಾಡಿದೆ ಎಂದು ಶಿವಕುಮಾರಿ ಒಪ್ಪಿಕೊಂಡಿರುವುದಾಗಿ ಆಖೆಯ ಸಹೋದರ ತಿಳಿಸಿದ್ದಾರೆ. (ಏಜೆನ್ಸೀಸ್)