ಮನುಷ್ಯರ ವಿರುದ್ಧ ನಿಲ್ಲದ ಸೇಡಿನ ಸಮರ: 13 ವರ್ಷದ ಬಾಲಕನ ಮೇಲೆ ತೋಳ ದಾಳಿ! ಮಕ್ಕಳೇ ಇವುಗಳ ಟಾರ್ಗೆಟ್​

ವಿಜಯವಾಣಿ - 2024-09-16T175713.165
Published on

ಉತ್ತರಪ್ರದೇಶ: ತಮ್ಮ ಮರಿಗಳನ್ನು ಕಳೆದುಕೊಂಡ ತೋಳಗಳ ಗುಂಪೊಂದು ನಡೆಸುತ್ತಿರುವ ದಾಳಿಯಿಂದ ಇದೀಗ ಉತ್ತರ ಪ್ರದೇಶ ಜನರು ಅಕ್ಷರಶಃ ಭಯಭೀತರಾಗಿದ್ದಾರೆ. ಅದರಲ್ಲೂ ಬಹ್ರೈಚ್ ಜಿಲ್ಲೆಯ ಹಲವು ಗ್ರಾಮಗಳಲ್ಲಿನ ಜನರು ಈ ಪರಭಕ್ಷಕಗಳ ದಾಳಿಗೆ ಹೆದರಿ ತಮ್ಮ ತಮ್ಮ ಮನೆಯೊಳಗೆ ಅವಿತು ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ತೋಳಗಳನ್ನು ಹಿಡಿಯಲು ರಾಜ್ಯ ಸರ್ಕಾರ ದೊಡ್ಡ ಕಾರ್ಯಾಚರಣೆಯನ್ನೇ ನಡೆಸುತ್ತಿದ್ದು, ನೂರಾರು ಅಧಿಕಾರಿಗಳು ಮತ್ತು ಪಡೆಗಳನ್ನು ಈಗಾಗಲೇ ತೋಳಗಳಿರುವ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.

ವರದಿಗಳ ಪ್ರಕಾರ, ಇಲ್ಲಿಯವರೆಗೆ ಒಟ್ಟು ಆರು ತೋಳಗಳ ಪೈಕಿ ಐದನ್ನು ಸೆರೆಹಿಡಿಯಲಾಗಿದ್ದು, ಒಂದೇ ಒಂದು ತೋಳ ಮಾತ್ರ ಅರಣ್ಯ ಅಧಿಕಾರಿಗಳ ಕೈಗೆ ಸಿಗದೆ ಎಂದಿನಂತೆ ತನ್ನ ಸೇಡಿನ ದಾಳಿಯನ್ನು ಮುಂದುವರೆಸಿದೆ. ಈಗಾಗಲೇ 10 ಮಕ್ಕಳು ಮತ್ತು ಒಬ್ಬ ಮಹಿಳೆಯನ್ನು ಬಲಿ ಪಡೆದಿರುವ ಈ ಪರಭಕ್ಷಕಗಳು 51 ಮಂದಿಯನ್ನು ಗಂಭೀರವಾಗಿ ಗಾಯಗೊಳಿಸಿದೆ. ಇಷ್ಟೆಲ್ಲಾ ಕಾವಲು, ಸಂಚು ಹೂಡಿದ್ದರು ಸಹ ಬಲೆಗೆ ಬೀಳದ ತೋಳ ಇದೀಗ 13 ವರ್ಷದ ಬಾಲಕನನ್ನು ಎಳೆದೊಯ್ದು ದಾಳಿ ನಡೆಸಿದೆ.

ಬಾಲಕ ತನ್ನ ಮನೆಯ ಟೆರೇಸ್‌ನಲ್ಲಿ ಮಲಗಿದ್ದ ವೇಳೆ ಏಕಾಏಕಿ ಅಟ್ಯಾಕ್ ಮಾಡಿದ ತೋಳ, ಆತನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದೆ. ಮಹ್ಸಿ ಪ್ರದೇಶದ ಪಿಪ್ರಿ ಮೋಹನ್ ಗ್ರಾಮದಲ್ಲಿ ಭಾನುವಾರ (ಸೆ.15) ರಾತ್ರಿ ಅರ್ಮಾನ್ ಅಲಿ ಎಂದು ಗುರುತಿಸಲಾದ ಬಾಲಕನ ಮೇಲೆ ತೋಳದ ಸೇಡಿನ ಅಟ್ಯಾಕ್ ನಡೆದಿದೆ. ದಾಳಿಯ ಸಮಯದಲ್ಲಿ ಬಾಲಕನ ಕುತ್ತಿಗೆಗೆ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ.

ಸದ್ಯ ಆರು ತೋಳಗಳ ಪೈಕಿ ಒಂದೇ ಒಂದು ತೋಳ ಬಾಕಿ ಉಳಿದಿದ್ದು, ಇದನ್ನು ಸೆರೆಹಿಡಿಯುವುದೇ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ,(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net