

| ಶ್ರೀಕಾಂತ್ ಶೇಷಾದ್ರಿ
ಬೆಂಗಳೂರು: ದೇಶದ ಶೈಕ್ಷಣಿಕ ವ್ಯವಸ್ಥೆಯನ್ನೇ ಅಲುಗಾಡಿಸಿರುವ ಕರೊನಾದಿಂದಾಗಿ ಮುಂದಿನ ಶೈಕ್ಷಣಿಕ ವರ್ಷವನ್ನು ಊಹಿಸಿಕೊಳ್ಳಲೂ ಆಗದ ಪರಿಸ್ಥಿತಿ ಎದುರಾಗಿದ್ದು, ವಿದ್ಯಾರ್ಥಿಗಳ ಭವಿಷ್ಯವೇನೆಂಬ ಚಿಂತೆ ಎದ್ದಿದೆ. ಈ ನಡುವೆ ಕೋವಿಡ್-19 ಹಿಮ್ಮೆಟ್ಟಿಸುವ ಲಸಿಕೆ ಸಿಗದೆ ಶೈಕ್ಷಣಿಕ ತರಗತಿ ಆರಂಭ ಸಾಧ್ಯವೇ? ಸಾಧ್ಯವಾದರೂ ಸಾಧುವೇ? ಪರ್ಯಾಯ ಅವಕಾಶಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮತ್ತು ಕೇಂದ್ರ ಸರ್ಕಾರಕ್ಕೆ ಪೂರಕವಾಗಿ ಬಿಜೆಪಿ ಶೈಕ್ಷಣಿಕ ಕ್ಷೇತ್ರದಿಂದ ಅಭಿಪ್ರಾಯ ಸಂಗ್ರಹಕ್ಕಿಳಿದಿದೆ. ಈ ಕಾರ್ಯಕ್ಕಾಗಿಯೇ ಇಲಾಖೆ 2 ಸಮಿತಿ ರಚಿಸಿದೆ. ಇತ್ತ ಬಿಜೆಪಿ ಕೂಡ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಅಭಿಪ್ರಾಯ ಕ್ರೋಡೀಕರಣ ಆರಂಭಿಸಿದೆ. ರಾಜ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂರ, ಪ್ರೊ| ಮಾ. ನಾಗರಾಜ್ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದ ಶೈಕ್ಷಣಿಕ ವ್ಯವಸ್ಥೆ ಕುರಿತಂತೆ 160 ಶಿಕ್ಷಣ ತಜ್ಞರು, ಶೈಕ್ಷಣಿಕ ಕ್ಷೇತ್ರದ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ.
1.09 ಕೋಟಿ ಮಕ್ಕಳು: ರಾಜ್ಯದಲ್ಲಿ 1.09 ಕೋಟಿ ಮಕ್ಕಳ ಭವಿಷ್ಯದ ಬಗ್ಗೆ ತೀರ್ವನವಾಗಬೇಕಾಗಿದೆ. 65 ಲಕ್ಷ ಮಕ್ಕಳು ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬಂದರೆ ಶೇ.85 ಮಕ್ಕಳು ಸರ್ಕಾರಿ ಮತ್ತು ಅನುದಾನಿತ ವ್ಯವಸ್ಥೆಯಲ್ಲಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ವಿಧಾನಪರಿಷತ್ ಸದಸ್ಯ ರವಿಕುಮಾರ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ಈ ಸಭೆಗಳು ನಡೆದಿವೆ.
ಕೇಂದ್ರ ಬಿಜೆಪಿಗೆ ವರದಿ: ಶಿಕ್ಷಣ ತಜ್ಞರ ಜತೆ ಒನ್ ಟು ಒನ್, ದೂರವಾಣಿ, ವೆಬ್ ಮೀಟಿಂಗ್ ಮೂಲಕ ಚರ್ಚೆ ನಡೆಸಲಾಗಿದೆ.ನಿವೃತ್ತ ಅಧಿಕಾರಿಗಳು, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡವರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಖಾಸಗಿ ಶಿಕ್ಷಣ ಸಂಸ್ಥೆ ನಡೆಸುವವರು, ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮಾಹಿತಿ ಹೆಕ್ಕಲಾಗಿದ್ದು, ಅದನ್ನು ರಾಜ್ಯ ಶಿಕ್ಷಣ ಸಚಿವರೊಂದಿಗೆ ಹಂಚಿಕೊಂಡಿದ್ದಾರೆ. ಪರಿಷತ್ ಸದಸ್ಯ ರವಿಕುಮಾರ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಅರುಣ್ ಶಹಾಪೂರ ಮತ್ತು ಮಾ.ನಾಗರಾಜ್ ಸಚಿವ ಸುರೇಶ್ ಕುಮಾರ್ ಜತೆ ಸುದೀರ್ಘ ಚರ್ಚೆ ಮಾಡಿದ್ದಾರೆ. ಅಂತಿಮವಾಗಿ ಈ ಮಾಹಿತಿಗಳ ಒಟ್ಟು ಸಾರಾಂಶವನ್ನು ಕೇಂದ್ರ ಬಿಜೆಪಿಗೆ ಕಳಿಸಲಿದ್ದಾರೆ.
ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕವಾಗಿ 43 ಪ್ರಮುಖರ ಜತೆ ಮಾತುಕತೆ ನಡೆಸಲಾಗಿದೆ. ಕುಲಪತಿಗಳು, ವಿಶ್ರಾಂತ ಕುಲಪತಿಗಳು, ಹಿರಿಯ ಪ್ರೊಫೆಸರ್ಗಳು, ನಿವೃತ್ತ ಅಧಿಕಾರಿಗಳೊಂದಿಗೂ ವಿಚಾರ ವಿನಿಮಯ ನಡೆಸಲಾಗಿದೆ. ಲಿಖಿತ ರೂಪದಲ್ಲೂ ಕೆಲವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ವಿಚಾರವನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಜತೆಗೂ ರ್ಚಚಿಸಿದ್ದಾರೆ. ಎಂ.ಕೆ.ಶ್ರೀಧರ್, ನಿರಂಜನಾರಾಧ್ಯ, ಗೋ.ಮಧುಸೂಧನ್, ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯ ನೀಡಿದವರ ಪಟ್ಟಿಯಲ್ಲಿದ್ದಾರೆ.
ಅಭಿಪ್ರಾಯ ಯಾಚನೆ: ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹಂತಕ್ಕೆ ಸಂಬಂಧಪಟ್ಟಂತೆ 160 ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ 43 ಪ್ರಮುಖರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶಾಲಾ ಆರಂಭ ಹೇಗೆ ಸಾಧ್ಯವಿದೆ? ಶೈಕ್ಷಣಿಕ ಕ್ಯಾಲೆಂಡರ್ ಯಾವ ರೀತಿ ಇರಬೇಕಾಗುತ್ತದೆ? ಪ್ರವೇಶದ ವಿಧಾನ ಹೇಗಿರಬೇಕು? ಒಂದು ವೇಳೆ ಶಾಲೆ ಆರಂಭ ತಡವಾದರೆ ಅಲ್ಲಿಯವರೆಗೂ ಮಕ್ಕಳನ್ನು ಶೈಕ್ಷಣಿಕವಾಗಿ ತೊಡಗಿಸುವುದು ಹೇಗೆ? ಶಾಲೆ ಆರಂಭಿಸಿದರೆ ಸಾಮಾಜಿಕ ಅಂತರ ಕಾಪಾಡುವುದು ಹೇಗೆ? ಎಂಬಿತ್ಯಾದಿ ವಿಚಾರದಲ್ಲಿ ಅಭಿಪ್ರಾಯ ಕೇಳಲಾಗಿದೆ.
ಪರ್ಯಾಯ ಮಾರ್ಗಗಳ ಹುಡುಕಾಟ: ದೀರ್ಘಾವಧಿ ರಜೆ ಅವಧಿ ಬಳಿಕ ಮಕ್ಕಳನ್ನು ಬೌದ್ಧಿಕ ಚೇತೋಹಾರಿಯಾಗಿ ಇಡುವ ದೊಡ್ಡ ಸವಾಲಿದೆ. ಒಂದು ವೇಳೆ ಶಾಲೆ ಆರಂಭ ಬೇಡವೆಂಬ ತೀರ್ವನವಾದರೆ ಶಾಲೆ ಆರಂಭವಾಗುವವರೆಗಾದರೂ ಅವರನ್ನು ಶೈಕ್ಷಣಿಕವಾಗಿ ಸಂಭಾಳಿಸಬೇಕಾದ ಅನಿವಾರ್ಯತೆ ಸರ್ಕಾರಕ್ಕಿದೆ. ಇದೇ ವೇಳೆ ಪರ್ಯಾಯ ಶೈಕ್ಷಣಿಕ ಮಾರ್ಗದ ಬಗ್ಗೆ ಕೂಡ ಆಲೋಚನೆ ನಡೆದಿದೆ. ಪಠ್ಯವಸ್ತುವನ್ನು ಡಿಜಿಟಲ್ ಹಾಗೂ ಆನ್ಲೈನ್ ರೂಪದಲ್ಲಿ ನೀಡುವ ಮೂಲಕ ಮಕ್ಕಳು ಅದರತ್ತ ಗಮನ ಹರಿಸುವಂತೆ ಮಾಡುವುದು, ನಿರಂತರತೆ ಕಾಪಾಡಿಕೊಳ್ಳುವ ಬಗ್ಗೆಯೂ ಚರ್ಚೆಗಳು ನಡೆದಿದೆ.
ಸಂಕಷ್ಟವೇನು?: ಕರೊನಾ ನಿಯಂತ್ರಣಕ್ಕೆ ಬರುವವರೆಗೂ ಸಾರ್ವಜನಿಕವಾಗಿ ಸೇರುವುದು ಕಷ್ಟ ಸಾಧ್ಯ. ಶಾಲೆ ಕಾಲೇಜುಗಳಲ್ಲಿ ಮಕ್ಕಳು ಸೇರುವುದರಿಂದ ಅದೇ ಸೋಂಕಿನ ಫ್ಯಾಕ್ಟರಿಯಾಗಬಹುದೆಂಬ ಭಯ ಸರ್ಕಾರಕ್ಕಿದೆ. ಶಾಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಸಾಧ್ಯ. ಈ ಕಾರಣಕ್ಕೆ ಪರ್ಯಾಯ ಅವಕಾಶಗಳ ಬಗ್ಗೆ ಪ್ರಯತ್ನ ಆರಂಭಿದೆ.