ನ್ಯಾಯದೇವತೆ: ವಯಸ್ಕ ಮಗ ಯಾರ ಹತ್ತಿರ ಇರಬೇಕು?

Family
Published on
ನನಗೂ ಮತ್ತು ನನ್ನ ಪತಿಗೂ ವಿಚ್ಛೇದನವಾಗಿ ಹತ್ತುವರ್ಷಗಳಾಗಿವೆ. ನಮಗೆ ಒಬ್ಬ ಮಗ ಇದ್ದಾನೆ. ವಿಚ್ಛೇದನಕ್ಕೆ ಮೊದಲು ಮತ್ತು ನಂತರ ನಾನೇ ನನ್ನ ಮಗನನ್ನು ಸಾಕಿ ವಿದ್ಯಾಭ್ಯಾಸ ಕೊಡಿಸಿದ್ದೇನೆ. ನನ್ನ ಗಂಡ ಮಗನ ಹತ್ತಿರ ಯಾವಾಗಲೂ ಸಂಬಂಧವನ್ನೇ ಇಟ್ಟುಕೊಳ್ಳಲಿಲ್ಲ. ಈಗ ನನ್ನ ಮಗನಿಗೆ ಹತ್ತೊಂಬತ್ತು ವರ್ಷ ವಯಸ್ಸು. ಈಗ ನನ್ನ ಮಗನ ಹತ್ತಿರ ಬಂದು ಮಾತಾಡಿ ಅವನಿಗೆ ಆಗಾಗ ದುಡ್ಡು ಕಾಸು ಕೊಡಲು ಪ್ರಾರಂಭಿಸಿದ್ದಾನೆ. ಅವನನ್ನು ವಿದೇಶದಲ್ಲಿ ಓದಿಸುತ್ತೇನೆ ಎಂದು ಹೇಳುತ್ತಿದ್ದಾನೆ. ನನ್ನ ಮಗ ಈಗ ನಾನು ಅಪ್ಪನ ಹತ್ತಿರವೇ ಹೋಗುತ್ತೇನೆ ಎನ್ನುತ್ತಿದ್ದಾನೆ. ಇದು ಯಾವ ನ್ಯಾಯ? ಇಷ್ಟು ವರ್ಷ ಸಾಕಿದ ತಾಯಿಯ ಹತ್ತಿರವೇ ಇರಬೇಕಲ್ಲವೇ? ತಂದೆ ಮಗನನ್ನು

ಕರೆದುಕೊಂಡು ಹೋಗಬಾರದು ಎಂದು ನಾನು ನ್ಯಾಯಾಲಯದಿಂದ ಆದೇಶ ಪಡೆಯಲು ಆಗುತ್ತದೆಯೇ/ ಈ ಕೇಸಿಗೆ ಎಷ್ಟು ಖರ್ಚು ಆಗುತ್ತದೆ ? ಎಷ್ಟು ದಿನಗಳು ಆಗುತ್ತವೆ?

ಹದಿನೆಂಟು ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನ ಮಕ್ಕಳು ತಂದೆ/ತಾಯಿ ಅಥವಾ ಯಾರ ಹತ್ತಿರವಾದರೂ ಇರಬಹುದು. ಅದು ವಯಸ್ಕ ಮಕ್ಕಳ ಸ್ವ ಇಚ್ಛೆಗೆ ಸಂಬಂಧಪಟ್ಟ ವಿಷಯ. ನನ್ನ ಹತ್ತಿರವೇ ಇರಬೇಕು ಎಂದು ನೀವು ಪ್ರಕರಣ ದಾಖಲಿಸಲು ಆಗುವುದಿಲ್ಲ. ನೀವು ಬೇಕಿದ್ದರೆ, ನಿಮ್ಮ ತಾಲ್ಲೂಕಿನ ನ್ಯಾಯಾಲಯದಲ್ಲಿ ಮಧ್ಯಸ್ಥಿಕೆ ಕೇಂದ್ರ ಎಂದು ಇರುತ್ತದೆ. ಅಲ್ಲಿ ನೀವು ಒಂದು ಅರ್ಜಿ ಕೊಡಿ. ನನಗೂ ನನ್ನ ವಿಚ್ಛೇದಿತ ಪತಿಗೂ ಮಧ್ಯೆ ನಮ್ಮ ಮಗನ ವಿಷಯದಲ್ಲಿ ಕೆಲವು ಸಮಸ್ಯೆಗಳು ಇವೆ. ಅದನ್ನು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ/ಪಿ.ಎಲ್.ಎಂ ಮೂಲಕ ಪರಿಹರಿಸಿ ಕೊಡಿ ಎಂದು ಕೇಳಿಕೊಳ್ಳಿ. ಅಲ್ಲಿ ನಿಮ್ಮನ್ನೂ ನಿಮ್ಮ ಪತಿಯನ್ನೂ ಕರೆಯಿಸಿ ಮಾತಾಡಿದ ಮೇಲೆ ನೀವಿಬ್ಬರೂ ಸೇರಿ ಮಗನ ಬಗ್ಗೆ ಒಂದು ತೀರ್ವನಕ್ಕೆ ಬರಲು ಸಾಧ್ಯವಾಗಬಹುದು. ಕೇಸು ಹಾಕಿದರೆ ನಿಲ್ಲುವುದಿಲ್ಲ.

(ಲೇಖಕಿ ಕರ್ನಾಟಕ ಉಚ್ಛ ನ್ಯಾಯಾಲದ ಹಿರಿಯ ವಕೀಲರು ಮತ್ತು ಹಿರಿಯ ಮಧ್ಯಸ್ಥಿಕೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net