

ಬೆಂಗಳೂರು: 'ಚಂದ್ರನಿಂದ ಬಂದ ಮೊದಲ ಚಿತ್ರ' ಎಂದು ವಿರೂಪಗೊಳಿಸಿದ ಚಾಯ್ವಾಲಾನ ಚಿತ್ರವೊಂದನ್ನು ನಟ ಪ್ರಕಾಶ್ ರಾಜ್ ನಿನ್ನೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದು ವೈರಲ್ ಆಗಿದ್ದಲ್ಲದೆ ವಿವಾದಾತ್ಮಕವಾಗಿ ಪರಿಣಮಿಸಿ ತೀವ್ರ ಟೀಕೆಗೂ ಒಳಗಾಗಿದೆ.
ಆದರೆ ಇದೀಗ ಅವುಗಳಿಗೆಲ್ಲ ಕ್ಯಾರೇ ಎನ್ನದ ಪ್ರಕಾಶ್ ರಾಜ್ ಮತ್ತೊಂದು ಎಕ್ಸ್ ಮಾಡಿ ಟೀಕಿಸಿದ್ದವರನ್ನು ಕೆಣಕಿದ್ದಾರೆ. 'ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು. ನಾನು ನಮ್ಮ ಕೇರಳದ ಚಾಯ್ವಾಲಾರನ್ನು ಸಂಭ್ರಮಿಸುವ ಆರ್ಮ್ಸ್ಟ್ರಾಂಗ್ ಕಾಲದ ಜೋಕನ್ನು ಹೇಳಿದ್ದೆ. ಟ್ರೋಲಿಗರಿಗೆ ಕಂಡ ಚಾಯ್ವಾಲಾ ಯಾರು?' ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್, 'ನಿಮಗೆ ಜೋಕ್ ಅರ್ಥ ಆಗಲಿಲ್ಲವೆಂದರೆ ಜೋಕು ನಿಮ್ಮ ಬಗ್ಗೆಯೇ.. ಬೆಳೆಯಿರಿ' ಎಂದು ಟೀಕಿಸಿದವರಿಗೆ ಹೇಳಿದ್ದಾರೆ.
ಪ್ರಕಾಶ್ ರಾಜ್ ನಿನ್ನೆ ಮಾಡಿದ್ದ ಆ ಪೋಸ್ಟ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಇದು ಇಸ್ರೋಗೆ ಮಾಡಿದ ಅವಮಾನ, ದೇಶಕ್ಕೆ ಮಾಡಿದ ಅಪಮಾನ ಎಂದು ಹಲವರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದ್ದರು. ಇಂದೂ ಟೀಕೆಗಳು ಮುಂದುವರಿದಿದ್ದು, ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಪ್ರಕಾಶ್ ರಾಜ್ ಈ ಪೋಸ್ಟ್ ಮಾಡಿದ್ದಾರೆ.