ಚಳಿಗಾಲ ಶುರು, ವಾಡಿಕೆಗಿಂತ ನಡುಕ: ಫೆಬ್ರವರಿವರೆಗೂ ಚಳಿ ಮುಂದುವರಿಕೆ, ರಾಜ್ಯದಲ್ಲಿ ಇಳಿಕೆಯಾಗಲಿದೆ ಮಳೆ..

Winter
Published on

ಬೆಂಗಳೂರು: ರಾಜ್ಯದಲ್ಲಿ ಚಳಿಗಾಲ ಆರಂಭವಾಗಿದೆ. ನಿರಂತರವಾಗಿ ಮಳೆ ಸುರಿದ ಹಿನ್ನೆಲೆ ಹಾಗೂ ವಾತಾವರಣದಲ್ಲಿ ತೇವಾಂಶ ಇರುವುದರಿಂದ ಈ ಬಾರಿ ವಾಡಿಕೆಗಿಂತ ಹೆಚ್ಚು ಚಳಿ ಕಾಣಿಸಿಕೊಳ್ಳಲಿದೆ. ಈಗಾಗಲೆ ಶುರುವಾಗಿರುವ ಚಳಿಗಾಲ ಫೆಬ್ರವರಿವರೆಗೆ ಮುದುವರಿಯಲಿದೆ.

ಚಳಿಗಾಲದಲ್ಲಿ ಉತ್ತರದಿಂದ ದಕ್ಷಿಣ ದಿಕ್ಕಿನತ್ತ ಗಾಳಿ ಬೀಸಲಿದೆ. ಚಳಿಗಾಲ ಶುರುವಾಗುವ ಮುನ್ನ ಮಳೆ ಕಡಿಮೆ ಆಗಲಿದೆ. ಅದರಂತೆ, 4-5 ದಿನಗಳಿಂದ ಮಳೆ ಕಡಿಮೆಯಾಗಿದ್ದು, ಚಳಿಗಾಲ ಆರಂಭಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಸದ್ಯ ಮೋಡ ಕವಿದ ವಾತಾವರಣ ಇರುವುದರಿಂದ ತಣ್ಣನೆ ಗಾಳಿ ಬೀಸುತ್ತಿದೆ. ಹಲವು ಜಿಲ್ಲೆಗಳಲ್ಲಿ ತಂಪಾದ ವಾತಾವರಣ ಉಂಟಾಗಿದ್ದು, ರಾತ್ರಿ ವೇಳೆ ಕ್ರಮೇಣ ಚಳಿ ಆವರಿಸಿಕೊಂಡ ಅನುಭವವಾಗುತ್ತಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಸಹಿತ ತುಂತುರು ಮಳೆಯಾಗಿದೆ. ಇದರಿಂದ ಕನಿಷ್ಠ ತಾಪಮಾನದಲ್ಲಿ 2 ಹಾಗೂ ಗರಿಷ್ಠ ತಾಪಮಾನದಲ್ಲಿ ಸರಾಸರಿ 4 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ತಣ್ಣನೆಯ ಗಾಳಿಯಿಂದ ಜನ ಮೈನಡುಗುವ ಚಳಿಯ ಅನುಭವ ಪಡೆಯುತ್ತಿದ್ದಾರೆ. ಶಿವಮೊಗ್ಗ, ಬಳ್ಳಾರಿ, ಬೀದರ್, ರಾಯಚೂರು, ಗದಗ, ಮಂಡ್ಯ, ಮಡಿಕೇರಿ, ವಿಜಯಪುರ, ಮಂಡ್ಯ, ಮೈಸೂರು ಮತ್ತು ಹಾಸನದಲ್ಲಿ ಕನಿಷ್ಠ ತಾಪಮಾನದಲ್ಲಿ ಸರಾಸರಿ 3-4 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ಇದರಿಂದ ಆ ಜಿಲ್ಲೆಗಳಲ್ಲಿಯೂ ಚಳಿ ಆವರಿಸಿಕೊಂಡಿದೆ.

ಲಾ ನಿನಾ ಪರಿಣಾಮ: ರಾಜ್ಯದಲ್ಲಿ ಈ ಬಾರಿ ತುಸು ಹೆಚ್ಚು ಚಳಿ ಇರಲಿದೆ. ಏಕೆಂದರೆ, ಪೂರ್ವ ಹಾಗೂ ಮಧ್ಯ ಫೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾದರೆ ಲಾ ನಿನಾ ಎಂಬ ಅಂಶ ಉಂಟಾಗುತ್ತದೆ. ಲಾ ನಿನಾ ಪರಿಣಾಮದಿಂದಾಗಿ ಈಶಾನ್ಯ ಮಾರುತಗಳು ದುರ್ಬಲಗೊಂದು ಚಳಿ ಹೆಚ್ಚಳಕ್ಕೆ ಕಾರಣವಾಗಲಿದೆ. ಉತ್ತರದಿಂದ ದಕ್ಷಿಣ ಕಡೆಗೆ ಗಾಳಿ ಬೀಸಿದರೆ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ. ಬಂಗಾಳದ ಉಪಸಾಗರದಿಂದ ಗಾಳಿ ಬೀಸಿದರೆ ಅಥವಾ ದಕ್ಷಿಣದ ಹಿಂದೂ ಮಹಾಸಾಗರದಿಂದ ಗಾಳಿ ಬೀಸಿದರೂ ಕನಿಷ್ಟ ಹಾಗೂ ಗರಿಷ್ಟ ತಾಪಮಾನದಲ್ಲಿ ಏರಿಳಿತವಾಗಲಿದೆ.

ಶುಚಿ ಆಹಾರ ಸೇವಿಸಿ: ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಎದುರಾಗುವ ಸಾಧ್ಯತೆಗಳಿವೆ. ಕಾಲಿನ ಹಿಮ್ಮಡಿ, ತುಟಿ ಸೇರಿ ಕೈಕಾಲಿನ ಚರ್ಮ ಒಣಗಲಿದೆ. ಈ ಬಗ್ಗೆ ಜನರು ಅಗತ್ಯ ಮುನ್ನಚ್ಚರಿಕೆ ಕ್ರಮ ವಹಿಸಬೇಕು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜತೆಗೆ ಕುದಿಸಿ ಆರಿಸಿದ ನೀರು, ಬಿಸಿ ಹಾಗೂ ಶುಚಿಯಾದ ಆಹಾರ ಸೇವಿಸಿ. ಫ್ರೀಡ್ಜ್​ನಲ್ಲಿ ಹೆಚ್ಚು ಹೊತ್ತು ಇಟ್ಟ ಆಹಾರ ಸೇವಿಸಬಾರದು. ಧೂಳಿನಿಂದ ದೂರ ಇರಬೇಕು, ಚೆನ್ನಾಗಿ ಒಣಗಿಸಿದ ಬಟ್ಟೆಯನ್ನು ಮೈ ತುಂಬಾ ಧರಿಸುವುದು ಸೂಕ್ತ ಎನ್ನುತ್ತಾರೆ ವೈದ್ಯರು.

ಎಚ್ಚರಿಕೆಯ ಸಲಹೆ: ಮುಂಜಾನೆ 4ರಿಂದ 7 ಗಂಟೆ ಅವಧಿಯಲ್ಲಿ ಚಳಿ ತೀವ್ರತೆ ಹೆಚ್ಚಿರಲಿದೆ. ಈ ಅವಧಿಯಲ್ಲಿ ವಾಯು ವಿಹಾರ ಹಾಗೂ ವ್ಯಾಯಾಮಕ್ಕೆ ಹೋಗುವವರು ಎಚ್ಚರಿಕೆಯಿಂದ ಇರಬೇಕು. ಉಸಿರಾಟ ಸಮಸ್ಯೆ ಎದುರಿಸುತ್ತಿರುವವರು, ಎಲುಬು, ಕೀಲು ನೋವಿನಿಂದ ಬಳಲುತ್ತಿರುವವರು ಮನೆಯಿಂದ ಆಚೆಗೆ ಹೋಗಬಾರದು ಎನ್ನುತ್ತಾರೆ ತಜ್ಞರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net