

ಬೆಂಗಳೂರು: ಇತ್ತೀಚೆಗಷ್ಟೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ವ್ಯಾಪಕವಾಗಿ ಕೇಳಿಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಪ್ರಕರಣ ಲೋಕಸಭಾ ಚುನಾವಣೆಯ ಹಿನ್ನೆಲೆ ಹೊರಬಿದ್ದಿರುವುದು ಇದೀಗ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇನ್ನು ಈ ಕೇಸ್ ವಿಚಾರ ತೀವ್ರವಾಗುತ್ತಿದ್ದಂತೆ ಇದರ ಬೆನ್ನಲ್ಲೇ ಸಂಸದನ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧವೂ ಇದೇ ಆರೋಪ ಕೇಳಿಬಂದಿದೆ. ತಂದೆ ಮತ್ತು ಮಗ ಇಬ್ಬರ ವಿರುದ್ಧವೂ ಇದೀಗ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಎಫ್ಐಆರ್ ದಾಖಲಾಗಿತ್ತು. ಇದೀಗ ತಂದೆಯ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಈ ಹಿಂದೆ ಎಚ್.ಡಿ. ರೇವಣ್ಣ ಮನೆಯಲ್ಲಿ ಕೆಲಸ ಮಾಡಿದ್ದ ಮಹಿಳೆಯಿಂದಲೇ ದೂರು ದಾಖಲಾಗಿದೆ. ಭವಾನಿ ರೇವಣ್ಣ ಇಲ್ಲದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪ ಮಾಡಿದ್ದಾರೆ. ಅಲ್ಲದೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 354ಎ, 354ಡಿ, 506, 509ರಡಿಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಸದ್ಯ ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಪ್ರಿಯಾಂಕಾ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರೊಂದಿಗೆ ತೆಗೆಸಿಕೊಂಡ ಫೋಟೋವೊಂದನ್ನು ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ಹಂಚಿಕೊಳ್ಳುವ ಮೂಲಕ ಮೋದಿ ವಿರುದ್ಧ ಲೇವಡಿ ಮಾಡಿದ್ದಾರೆ.
"ಒಬ್ಬ ಹೆಸರಾಂತ ನಾಯಕರ ಜತೆ ನಿಂತಿರುವ ಪ್ರಧಾನಿಗಳು ಅವರ ಹೆಗಲ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲಿರುವ ನಾಯಕನ ಪರ ಚುನಾವಣಾ ಪ್ರಚಾರಕ್ಕಾಗಿ 10 ದಿನಗಳು ಹೋದ ಪ್ರಧಾನಿ, ಆತನನ್ನು ವೇದಿಕೆ ಮೇಲೆ ಮೆಚ್ಚಿ, ಮಾತನಾಡುತ್ತಾರೆ. ಆದರೆ, ಅದೇ ನಾಯಕ ಇಂದು ದೇಶದಿಂದ ಪರಾರಿಯಾಗಿದ್ದಾನೆ. ಇಂತಹ ನೀಚ, ಹೇಯ ಕೃತ್ಯಗಳನ್ನು ಕೇಳಿದಾಗ ಹೃದಯ ಹಿಂಡುತ್ತದೆ. ಆತ ನೂರಾರು ಹೆಣ್ಣುಮಕ್ಕಳ ಜೀವನ ಹಾಳುಮಾಡಿದ್ದಾನೆ. ಇಷ್ಟಾದರೂ ಸಹ ನೀವು ಇನ್ನೂ ಮೌನದಿಂದಲೇ ಇರ್ತೀರಾ ಮೋದಿ ಜೀ?" ಪ್ರಶ್ನಿಸುವ ಮುಖೇನ ಲೇವಡಿ ಮಾಡಿದ್ದಾರೆ.