ಆಸ್ಕರ್​​ 2025 ರದ್ದಾಗಲಿದೆಯೇ?; 96 ವರ್ಷಗಳಲ್ಲಿ ಮೊದಲ ಬಾರಿಗೆ ಈ ನಿರ್ಧಾರ | Oscars 2025

Untitled design - 2025-01-15T174730.524
Published on

ಲಾಸ್​ ಏಂಜಲೀಸ್​​​: ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಆಸ್ಕರ್ ಪ್ರಶಸ್ತಿಗೆ ಸಂಬಂಧಿಸಿದಂತೆ ಸುದ್ದಿಯೊಂದು ಹೊರಬೀಳುತ್ತಿದೆ. ಆಸ್ಕರ್ 2025(Oscars 2025) ರದ್ದಾಗಬಹುದು ಎಂದು ಹೇಳಲಾಗುತ್ತಿದೆ. 97ನೇ ಅಕಾಡೆಮಿ ಪ್ರಶಸ್ತಿಗಳು ಬೆಂಕಿಯಿಂದಾಗಿ ರದ್ದಾಗುವ ಹಂತದಲ್ಲಿದೆ ಎಂದು ದಿ ಸನ್‌ ಇತ್ತೀಚಿನ ವರದಿ ಹೇಳುತ್ತದೆ. ಆದರೆ ಇದು ಸಂಭವಿಸಿದಲ್ಲಿ 96 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಕಾಡೆಮಿ ಪ್ರಶಸ್ತಿಗಳನ್ನು ರದ್ದುಗೊಳಿಸಿದಂತಾಗುತ್ತದೆ. ಆಸ್ಕರ್​​ ಪ್ರಶಸ್ತಿ ಸಮಾರಂಭವನ್ನು ಲಾಸ್​ ಏಂಜಲೀಸ್​ನಲ್ಲಿ ನಡೆಸಲಾಗುತ್ತಿತ್ತು.

ಈ ಸಮಯದಲ್ಲಿ ಮಂಡಳಿಯ ಮುಖ್ಯ ಕಾಳಜಿಯು ಲಾಸ್ ಏಂಜಲೀಸ್‌ನಲ್ಲಿ ಅನೇಕ ಜನರು ಊಹಿಸಲಾಗದ ನಷ್ಟವನ್ನು ಅನುಭವಿಸುತ್ತಿರುವವರ ಕಡೆ ಇದೆ. ಈ ದುಃಖದಲ್ಲಿ​ ಸಮಾರಂಭವನ್ನು ಆಚರಿಸುತ್ತಿರುವಂತೆ ತೋರುವುದಿಲ್ಲ. ಮುಂದಿನ ವಾರದಲ್ಲಿ ಬೆಂಕಿ ಕಡಿಮೆಯಾದರೂ ನಗರವು ಇನ್ನೂ ನೋವಿನಲ್ಲಿದೆ ಮತ್ತು ತಿಂಗಳುಗಟ್ಟಲೆ ಆ ನೋವಿನೊಂದಿಗೆ ಹೋರಾಡುತ್ತಲೇ ಇರುತ್ತದೆ ಎಂಬುದು ವಾಸ್ತವ. ಆದ್ದರಿಂದ ಸೂಕ್ತ ಅವಕಾಶ ಸಿಕ್ಕಾಗ ಬೆಂಬಲ ನೀಡಿ ನಿಧಿ ಸಂಗ್ರಹಿಸುವತ್ತ ಗಮನ ಹರಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

2021ರಲ್ಲಿ ಇಡೀ ಜಗತ್ತು ಲಾಕ್‌ಡೌನ್‌ನಲ್ಲಿದ್ದಾಗಲೂ ಪ್ರಶಸ್ತಿ ಸಮಾರಂಭವನ್ನು ರದ್ದುಗೊಳಿಸುವ ಬದಲು ಎರಡು ತಿಂಗಳು ಮುಂದೂಡಲಾಗಿತ್ತು. ಆದರೆ ಟಾಮ್ ಹ್ಯಾಂಕ್ಸ್, ಎಮ್ಮಾ ಸ್ಟೋನ್, ಮೆರಿಲ್ ಸ್ಟ್ರೀಪ್ ಮತ್ತು ಸ್ಟೀವನ್ ಸ್ಪೀಲ್‌ಬರ್ಗ್‌ನಂತಹ ತಾರೆಗಳ ನೇತೃತ್ವದಲ್ಲಿ ಅಧಿಕೃತ ಅಕಾಡೆಮಿ ಪ್ರಶಸ್ತಿಗಳು, ನಗರದಲ್ಲಿನ ವಿನಾಶದ ಕಾರಣ ಸಮಾರಂಭವನ್ನು ರದ್ದುಗೊಳಿಸಬೇಕೇ ಎಂದು ನಿರ್ಧರಿಸಲು ಈಗ ಲಾಸ್​ ಏಂಜಲೀಸ್​​ನಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚಿನ ಕಾರಣ 97ನೇ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳ ಪ್ರಕಟಣೆಯನ್ನು ಒಂದು ವಾರ ಮುಂದೂಡಲಾಗಿದೆ. ನಾಮನಿರ್ದೇಶನಗಳನ್ನು ಜನವರಿ 23 ರಂದು ಪ್ರಕಟಿಸಲಾಗುವುದು ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ತಿಳಿಸಿದೆ.

ಅಕಾಡೆಮಿ ಸಿಇಒ ಬಿಲ್ ಕ್ರಾಮರ್ ಮತ್ತು ಅಕಾಡೆಮಿ ಅಧ್ಯಕ್ಷ ಜಾನೆಟ್ ಯಾಂಗ್ ಜಂಟಿ ಹೇಳಿಕೆಯಲ್ಲಿ, 'ಬೆಂಕಿಯ ಪರಿಣಾಮ ಮತ್ತು ನಮ್ಮ ಸಮುದಾಯದ ಹಲವಾರು ಜನರಿಗೆ ಉಂಟಾದ ಅಪಾರ ನಷ್ಟದಿಂದ ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ. ಅಕಾಡೆಮಿಯು ಚಲನಚಿತ್ರೋದ್ಯಮದಲ್ಲಿ ಯಾವಾಗಲೂ ಒಗ್ಗೂಡಿಸುವ ಶಕ್ತಿಯಾಗಿದೆ ಮತ್ತು ಕಷ್ಟಗಳನ್ನು ಎದುರಿಸಲು ನಾವು ಒಟ್ಟಾಗಿ ನಿಲ್ಲಲು ಬದ್ಧರಾಗಿದ್ದೇವೆ ಎಂದಿದ್ದಾರೆ.

ಲಾಸ್ ಏಂಜಲೀಸ್ ಪ್ರದೇಶದಲ್ಲಿ ಬೆಂಕಿ ಇನ್ನೂ ಸಕ್ರಿಯವಾಗಿರುವುದರಿಂದ ಫಿಲ್ಮ್ ಅಕಾಡೆಮಿ ತನ್ನ ಸದಸ್ಯರಿಗೆ ನಾಮನಿರ್ದೇಶನದ ಮತದಾನದ ಅವಧಿಯನ್ನು ಶುಕ್ರವಾರದವರೆಗೆ ವಿಸ್ತರಿಸಿದೆ. ಅಂದು ಬೆಳಗ್ಗೆಯೇ ನಾಮಪತ್ರಗಳನ್ನು ಪ್ರಕಟಿಸಬೇಕಿತ್ತು. 97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 2ರಂದು ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net