

ಢಾಕಾ: ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನಾಧಾರಿತ ಕಂಗನಾ ರಣಾವತ್ ನಿರ್ದೇಶನದ ಮುಂಬರುವ ಸಿನಿಮಾ ‘ಎಮರ್ಜೆನ್ಸಿ’ ಬಾಂಗ್ಲಾದೇಶದಲ್ಲಿ(Bangladesh) ಬಿಡುಗಡೆಯಾಗುವುದಿಲ್ಲ. ಈ ಸಿನಿಮಾದಲ್ಲಿ ಇಂದಿರಾಗಾಂಧಿಯವರು ಭಾರತದಲ್ಲಿ ಘೋಷಿಸಿದ ತುರ್ತುಪರಿಸ್ಥಿತಿಯ ಅವಧಿಯಲ್ಲಿನ ಪರಿಸ್ಥಿತಿಯನ್ನು ಒಳಗೊಂಡಿದೆ. ಚಿತ್ರದ ಕಥೆಗಿಂತ ಹೆಚ್ಚಾಗಿ ನಿಷೇಧಕ್ಕೆ ಕಾರಣ ಎರಡು ದೇಶಗಳ ನಡುವೆ ಇರುವ ಪ್ರಸ್ತುತ ಪರಿಸ್ಥಿತಿ ಎಂದು ಹೇಳಲಾಗಿದೆ.
ಬಾಂಗ್ಲಾದೇಶದಲ್ಲಿ ‘ಎಮರ್ಜೆನ್ಸಿ’ಯ ಪ್ರದರ್ಶನವನ್ನು ನಿಲ್ಲಿಸುವ ನಿರ್ಧಾರವು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪ್ರಸ್ತುತ ಉದ್ವಿಗ್ನ ಸಂಬಂಧಗಳಿಗೆ ಸಂಬಂಧಿಸಿದೆ ಎಂದು ಮೂಲವೊಂದು ತಿಳಿಸಿದೆ. ಅಲ್ಲದೆ ಇಂದಿರಾಗಾಂಧಿ ಅವರನ್ನು ದುರ್ಗಾದೇವಿ ಎಂದು ಕರೆದಿದ್ದ ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಇಂದಿರಾಗಾಂಧಿ ಸರ್ಕಾರ ನೀಡಿದ ಬೆಂಬಲವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ವಾಸ್ತವವಾಗಿ ಮುಜಿಬುರ್ ರೆಹಮಾನ್ ಅನ್ನು ಬಾಂಗ್ಲಾದೇಶದ ಪಿತಾಮಹ ಎಂದು ಕರೆಯಲಾಗುತ್ತದೆ. ಬಾಂಗ್ಲಾದೇಶದ ಉಗ್ರಗಾಮಿಗಳ ಕೈಯಲ್ಲಿ ಶೇಖ್ ಮುಜಿಬುರ್ ರೆಹಮಾನ್ ಹತ್ಯೆ ದೃಶ್ಯ ಸೇರಿದಂತೆ ಇತರೆ ದೃಶ್ಯಗಳನ್ನು ಚಿತ್ರದಲ್ಲಿ ತೋರಿಸಿರುವುದರಿಂದ ಈಗ ಅದನ್ನು ಬ್ಯಾನ್ ಮಾಡಲಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ವರದಿಗಳ ಪ್ರಕಾರ, ಪಾಕಿಸ್ತಾನದಿಂದ ಬಾಂಗ್ಲಾದೇಶದ ಸ್ವಾತಂತ್ರ್ಯದಲ್ಲಿ ಇಂದಿರಾ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಎರಡೂ ದೇಶಗಳ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕ ಅವರಿಗೆ ಆಗ್ರಹಿಸಿತ್ತು. ಅದೇನೇ ಇದ್ದರೂ 1971ರ ಭಾರತ-ಪಾಕಿಸ್ತಾನ ಯುದ್ಧಕ್ಕೆ ಕಾರಣವಾದ ಲಕ್ಷಾಂತರ ನಿರಾಶ್ರಿತರಿಗೆ ಆಶ್ರಯ ನೀಡುವ ಬದಲು ಪಾಕಿಸ್ತಾನದ ವಿರುದ್ಧ ಆರ್ಥಿಕವಾಗಿ ಯುದ್ಧ ಮಾಡುವುದು ಭಾರತಕ್ಕೆ ಉತ್ತಮ ಎಂದು ಇಂದಿರಾ ಅವರು ಭಾವಿಸಿದರು ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಭಾರತವು ಪಶ್ಚಿಮ ಪಾಕಿಸ್ತಾನ ಮತ್ತು ಅಂದಿನ ಪೂರ್ವ ಪಾಕಿಸ್ತಾನದ ವಿರುದ್ಧ (ನಂತರ ಬಾಂಗ್ಲಾದೇಶವಾಯಿತು) ಎರಡು ರಂಗಗಳಲ್ಲಿ ಯುದ್ಧವನ್ನು ನಡೆಸಿತು. ಪ್ರಸ್ತುತ ಉಪಖಂಡದಲ್ಲಿ ಬಾಂಗ್ಲಾದೇಶ ಭಾರತದ ಏಕೈಕ ಮಿತ್ರ ರಾಷ್ಟ್ರವಾಗಿತ್ತು. ಆದರೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಭಾರತವು ಈಗ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಭಯೋತ್ಪಾದಕ ಸರ್ಕಾರ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಶತ್ರು ನೆರೆಹೊರೆಯವರಿಂದ ಸುತ್ತುವರೆದಿದೆ.
ಅಂದ್ಹಾಗೆ ಬಾಂಗ್ಲಾದೇಶ ಭಾರತದ ಸಿನಿಮಾ ಬಿಡುಗಡೆಗೆ ನಿಷೇಧ ಹೇರಿರುವುದು ಇದೇ ಮೊದಲೆನಲ್ಲ. ಕಾರಣಾಂತರಗಳಿಂದ ಅಲ್ಲು ಅರ್ಜುನ್ ಅವರ 'ಪುಷ್ಪ 2' ಮತ್ತು ಕಾರ್ತಿಕ್ ಆರ್ಯನ್ ಅವರ 'ಭೂಲ್ ಭುಲೈಯಾ 3' ಬಿಡುಗಡೆಯನ್ನು ನಿಲ್ಲಿಸಲಾಯಿತು. ಆದರೆ ಎಮರ್ಜೆನ್ಸಿ ನಿಷೇಧದ ಬಗ್ಗೆ ನಟಿಯಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.
ಕಂಗನಾ ರಣಾವತ್ ಅವರ 'ಎಮರ್ಜೆನ್ಸಿ' ಸಿನಿಮಾ ಹಲವು ಅಡೆತಡೆಗಳನ್ನು ದಾಟಿ ಜನವರಿ 17ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಕಂಗನಾ ನಿರ್ದೇಶಿಸಿ ಮತ್ತು ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅನುಪಮ್ ಖೇರ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್)