ಮೂಗು ತೂರಿಸಿದ ಅಮೆರಿಕಕ್ಕೆ ಬುದ್ಧಿ ಕಲಿಸಲು ರಷ್ಯಾ ಸಜ್ಜು! ಸುಳಿವು ಕೊಟ್ಟ ಅಬ್ಬಾಸ್ ಅರಘ್ಚಿ, ಯುದ್ಧಕ್ಕೆ ಪುಟಿನ್​ ಪಡೆ? | Russia

ವಿಜಯವಾಣಿ (97)
Published on

Russia: ಇಂದು (ಜೂ.22) ಬೆಳಗ್ಗೆಯೇ ಇರಾನ್‌ನ ಮೂರು ಪ್ರಮುಖ ಪರಮಾಣು ನೆಲೆಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ಬಿ-2 ಸ್ಪಿರಿಟ್ ಬಾಂಬರ್‌ಗಳಿಂದ ದಾಳಿ ನಡೆಸಿದ ಅಮೆರಿಕ ಸೇನಾ ಪಡೆಗಳು, ಇರಾನ್​ ಮೇಲೆ ಸಂಘಟಿತ ವೈಮಾನಿಕ ದಾಳಿ ನಡೆಸಿತು. ಈ ಕುರಿತು ಇರಾನ್​ಗೆ ಎಚ್ಚರಿಕೆ ಕೊಟ್ಟ ಟ್ರಂಪ್​, ಇನ್ನೂ ಒಂದಷ್ಟು ದಾಳಿಗಳು ಬಾಕಿ ಉಳಿದಿವೆ ಎಂಬ ಸೂಚನೆಯನ್ನು ರವಾನಿಸಿದ್ದಾರೆ. ಅಮೆರಿಕ ದಾಳಿ ಬೆನ್ನಲ್ಲೇ ಅಲರ್ಟ್ ಆಗಿರುವ ರಷ್ಯಾ, ಟ್ರಂಪ್​ ಪಡೆ ಮೇಲಿನ ದಾಳಿಗೆ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ.

ಅಮೆರಿಕ ಸೇನೆ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ರಷ್ಯಾ ಜೊತೆಗೆ ಮಾತುಕತೆ ನಡೆಸಿರುವ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಶೀಘ್ರವೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ರನ್ನು ಭೇಟಿಯಾಗುವ ತವಕ ವ್ಯಕ್ತಪಡಿಸಿದ್ದಾರೆ. ಈ ಮಾತುಕತೆಗೆ ಈಗಾಗಲೇ ದಿನಾಂಕ ಮತ್ತು ಸಮಯ ಕೂಡ ನಿಗದಿಯಾಗಿದೆ. ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ರಾತ್ರಿಯಿಡೀ ವೈಮಾನಿಕ ದಾಳಿ ನಡೆಸಿದ ಅಮೆರಿಕಕ್ಕೆ ತಕ್ಕ ಪಾಠ ಕಲಿಸಲು ಇರಾನ್​ ರಷ್ಯಾ ಮೊರೆ ಹೋಗಿರುವುದು ದೊಡ್ಡ ಬೆಳವಣಿಗೆಯೇ ನಿಜ.

ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರಘ್ಚಿ, "ಸೋಮವಾರ (ಜೂ. 23) ಬೆಳಗ್ಗೆ ಪುಟಿನ್ ಅವರೊಂದಿಗೆ ಸಮಾಲೋಚನೆ ನಡೆಯಲಿದೆ. ರಷ್ಯಾ ಇರಾನ್‌ನ ಸ್ನೇಹಿತ. ನಾವು ಸದಾ ಪರಸ್ಪರ ಸಮಾಲೋಚಿಸುತ್ತೇವೆ. ನಾಳೆ ಬೆಳಗ್ಗೆ ರಷ್ಯಾದ ಅಧ್ಯಕ್ಷರೊಂದಿಗೆ ಗಂಭೀರ ಸಮಾಲೋಚನೆಗಾಗಿ ನಾನು ಮಾಸ್ಕೋಗೆ ತೆರಳುತ್ತಿದ್ದೇನೆ. ಪರಮಾಣು ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಕೆಂಪು ರೇಖೆಯನ್ನು ದಾಟಿ ಬಿಟ್ಟಿದ್ದಾರೆ. ಮುಂದಿನ ಪರಿಣಾಮಗಳನ್ನು ಎದುರಿಸಲು ಸಜ್ಜಾಗಿ" ಎಂದು ಟ್ರಂಪ್​ಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಮಾಸ್ಕೋದಲ್ಲಿ ಮಾತನಾಡಿರುವ ರಷ್ಯಾ ಮಾಜಿ ಅಧ್ಯಕ್ಷ ಮತ್ತು ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್, "ಅಮೆರಿಕ ಮಧ್ಯಪ್ರಾಚ್ಯದಲ್ಲಿ ಹೊಸ ಯುದ್ಧಕ್ಕೆ ಕರೆ ಕೊಟ್ಟಿದೆ. ಶಾಂತಿಪ್ರಿಯ, ಕದನ ವಿರಾಮ ತಂದಿಡುವ ಅಧ್ಯಕ್ಷರಾಗಿ ಕಾಣಿಸಿಕೊಂಡ ಟ್ರಂಪ್, ಇದೀಗ ದಿಢೀರ್​ ಎಂಬಂತೆ ಹೊಸ ಯುದ್ಧವನ್ನು ಪ್ರಾರಂಭಿಸಿದ್ದಾರೆ. ಹಲವಾರು ದೇಶಗಳು ತಾವೇ ಸಿದ್ಧಪಡಿಸಿರುವ ಬಾಂಬ್, ಕ್ಷಿಪಣಿಗಳನ್ನು​ ನೇರವಾಗಿ ಇರಾನ್‌ಗೆ ಪೂರೈಸಲು ಸಿದ್ಧವಾಗಿವೆ" ಎಂದು ಮೆಡ್ವೆಡೆವ್ ಹೇಳಿದ್ದಾರೆ. ಅಸಲಿಗೆ ಅವರು ಇಲ್ಲಿ ಯಾವ ರಾಷ್ಟ್ರಗಳನ್ನು ಉಲ್ಲೇಖಿಸಿದರು ಎಂಬುದು ಸ್ಪಷ್ಟವಾಗಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net