ತಿರುಪತಿ ದೇವಸ್ಥಾನದ ಆಡಳಿತದಲ್ಲಿ ಇನ್ಮುಂದೆ ಹಿಂದೂಯೇತರರಿಗೆ ಜಾಗವಿಲ್ಲ; ಹೊಸ ಆದೇಶ ಹೊರಡಿಸಿದ TTD

Tirupati
Published on

ತಿರುಪತಿ: ಕಲಿಯುಗದ ವೈಕುಂಠ, ಹಿಂದೂಗಳ ಆರಾಧ್ಯದೈವ ತಿರುಪತಿ ತಿಮ್ಮಪ್ಪನಿಗೆ ಭಾರತ ಮಾತ್ರವಲ್ಲೇ ವಿಶ್ವಾದಾದ್ಯಂತ ಕೋಟ್ಯಂತರ ಭಕ್ತರಿದ್ದು, ಆತನ ದರ್ಶನ ಪಡೆಯಲು ದೇಶ-ವಿದೇಶಗಳಿಂದ ಪ್ರತಿನಿತ್ಯ ಆಗಮಿಸುತ್ತಾರೆ. ತಿರುಪತಿಗೆ (Tirupati) ಭೇಟಿ ಕೊಡುವ ಭಕ್ತರಿಗೆ ನೀಡಲಾಗುವ ಲಡ್ಡು (Laddu) ಪ್ರಸಾದವನ್ನು ಪ್ರಾಣಿಗಳ ಕೊಬ್ಬನ್ನು (Animal Fat) ಬಳಸಿ ಮಾಡಲಾಗುತ್ತಿದೆ ಎಂಬ ಆರೋಪವೂ ವಿಶ್ವವ್ಯಾಪಿ ಸದ್ದು ಮಾಡಿತ್ತು. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಚರ್ಚೆಗೆ ನಾಂದಿ ಹಾಡಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ತಿರುಪತಿ ತಿರುಮಲ ದೇವಾಲಯ (TTD) ಆಡಳಿತ ಮಂಡಳಿಯು ಮಹತ್ವದ ನಿರ್ಣಯ ಒಂದನ್ನು ಕೈಗೊಂಡಿದ್ದು, ಈ ಸಂಬಂಧ ನಿರ್ಣಯವನ್ನು ಅಂಗೀಕರಿಸಿದೆ.

ಲಡ್ಡು ವಿವಾದ ಭುಗಿಲೇಳುತ್ತಿದ್ದಂತೆ ಹಿಂದೂ ದೇವಾಲಯಗಳಲ್ಲಿ ಅನ್ಯ ಧರ್ಮೀಯರಿಗೆ ಕೆಲಸ ನೀಡಬಾರದು. ಒಂದು ವೇಳೆ ಕೆಲಸ ಮಾಡುತ್ತಿರುವವರನ್ನು ಕೂಡಲೇ ವಜಾ ಮಾಡಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಇದೀಗ ಟಿಟಿಡಿಯ ನೂತನ ಆಡಳಿತ ಮಂಡಳಿ ಇದಕ್ಕೆ ಸಮ್ಮತ್ತಿ ಸೂಚಿಸಿದ್ದು, ಟಿಟಿಡಿಯಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರನ್ನು ಗುರುತಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಈ ಬಗ್ಗೆ ಮಾತನಾಡಿರುವ ಟಿಟಿಡಿಯ (TTD) ನೂತನ ಅಧ್ಯಕ್ಷ ಬಿ.ಆರ್. ನಾಯ್ಡು (BR Naidu), ಟಿಟಿಡಿಯಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರನ್ನು ಗುರುತಿಸಿ ಆಡಳಿತ ಮಂಡಳಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುತ್ತದೆ. 2018ರ ವರದಿ ಪ್ರಕಾರ ಟಿಟಿಡಿಯಲ್ಲಿ 44 ಮಂದಿ ಹಿಂದೂಯೇತರರು ಕೆಲಸ ಮಾಡುತ್ತಿದ್ದು, ಈಗ ಅವರ ಸಂಖ್ಯೆ ಏರಿಕೆಯಾಗಿರಬಹುದು ಎಂದು ಭಾವಿಸುತ್ತೇವೆ.

ಹಲವು ವರ್ಷಗಳಿಂದ, ದೇವಸ್ಥಾನ ಮಂಡಳಿ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು ಎಂದು ಟಿಟಿಡಿ ಕಾಯ್ದೆಯನ್ನು ಮೂರು ಬಾರಿ ತಿದ್ದುಪಡಿ ಮಾಡಲಾಗಿದೆ. 1989 ರಲ್ಲಿ ಹೊರಡಿಸಲಾದ ಸರ್ಕಾರಿ ಆದೇಶವು ಟಿಟಿಡಿ-ಆಡಳಿತದ ಹುದ್ದೆಗಳಿಗೆ ನೇಮಕಾತಿಗಳನ್ನು ಹಿಂದೂಗಳಿಗೆ ಸೀಮಿತಗೊಳಿಸಬೇಕೆಂದು ಆದೇಶಿಸಿತ್ತು. ಈ ನಿಬಂಧನೆಗಳ ಹೊರತಾಗಿಯೂ, ಹಿಂದೂಯೇತರರು ದೇವಸ್ಥಾನದ ಒಳಗಡೆ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ.

ಮಂಡಳಿಯ 7 ಸಾವಿರ ಖಾಯಂ ಉದ್ಯೋಗಿಗಳ ಪೈಕಿ ಸುಮಾರು 1000 ಮಂದಿ ಅನ್ಯಧರ್ಮೀಯ ನೌಕರರಿದ್ದು, ಇವರಲ್ಲಿ ಕೆಲವರು ಟಿಟಿಡಿಯ ಖಾಯಂ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಟಿಟಿಡಿ ಹಿಂದೂ ಧಾರ್ಮಿಕ ಸಂಸ್ಥೆಯಾಗಿದ್ದು, ದೇವಸ್ಥಾನದಲ್ಲಿ ಕೆಲಸ ಮಾಡಲು ಹಿಂದೂಯೇತರರನ್ನು ನೇಮಿಸಿಕೊಳ್ಳಬಾರದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಅವರನ್ನು ಬೇರೆ ಬೇರೆ ಇಲಾಖೆಗಳಲ್ಲಿ ಸೇರಿಸಿಕೊಳ್ಳಲು ಅಥವಾ ಅವರಿಗೆ ಸ್ವಯಂ ನಿವೃತ್ತಿ ಯೋಜನೆ ನೀಡಲು ನಾವು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net