

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ಗೆ (IPL) ಸಂಬಂಧಿಸಿದ ಕೆಲಸಗಳು ಈಗಾಗಲೇ ಬಿರುಸುಗೊಂಡಿದ್ದು, ನವೆಂಬರ್ 24-25ರಂದು ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆ ಮೇಲೆ ಎಲ್ಲರು ಕಣ್ಣು ನೆಟ್ಟಿದ್ದಾರೆ. ರಿಟೇನ್ಗೆ (Retain) ಸಂಬಂಧಿಸಿದಂತೆ ತಂಡಗಳು ಈಗಾಗಲೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆರ್ಸಿಬಿ (RCB) ತಂಡ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಇನ್ನೂ ಈ ಬಾರಿ ಕಪ್ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಆರ್ಸಿಬಿ (RCB) ಹೊಸ ಯೋಜನೆಗಳೊಂದಿಗೆ ಕಣ್ಕಕಿಳಿಯುತ್ತಿದ್ದು, ಇದೀಗ ತಂಡಕ್ಕೆ ನೂತನ ಬೌಲಿಂಗ್ ಕೋಚ್ಅನ್ನು ನೇಮಕ ಮಾಡಿದೆ.
ಮುಂಬೈ ತಂಡದ ಸೀನಿಯರ್ ಕೋಚ್ ಓಂಕಾರ್ ಸಾಲ್ವಿ (Omkar Salvi) ಅವರನ್ನು ಫ್ರಾಂಚೈಸಿ ನೇಮಕ ಮಾಡಿದೆ. ಪ್ರಸ್ತುತ ಮುಂಬೈ ರಣಜಿ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಓಂಕಾರ್ ಅವರು ಎಂಸಿಎ (MCA) ಜತೆ ಮಾಡಿಕೊಂಡಿರುವ ಒಪ್ಪಂದ ಕೆಲವೇ ತಿಂಗಳುಗಳಲ್ಲಿ ಕೊನೆಗೊಳ್ಳಲಿದ್ದು, ಆ ನಂತರ ಅವರು ಆರ್ಸಿಬಿ (RCB) ಬೌಲಿಂಗ್ ಕೋಚ್ ಆಗಿ ಅದಿಕಾರ ವಹಿಸಿಕೊಳ್ಳಲಿದ್ದಾರೆ.
2023-24 ರ ರಣಜಿ ಟ್ರೋಫಿಗೆ ಮುನ್ನ ಓಂಕಾರ್ ಸಾಲ್ವಿ ಮುಂಬೈ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಮುಂದಾಳತ್ವದಲ್ಲೇ, ಮುಂಬೈ 2023-24 ರಣಜಿ ಟ್ರೋಫಿ ಗೆಲ್ಲುವ ಮೂಲಕ 8 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯವಾಡಿತ್ತು. ಅಷ್ಟೇ ಅಲ್ಲ, ಮುಂಬೈ ತಂಡ 27 ವರ್ಷಗಳ ನಂತರ ಪ್ರತಿಷ್ಠಿತ ಇರಾನಿ ಕಪ್ ಕೂಡ ಗೆದ್ದಿತ್ತು. ಈ ಎರಡು ಗೆಲುವಿನಿಂದ ಓಂಕಾರ್ ಸಾಲ್ವಿ ಹೆಸರು ದೇಶಿ ಕ್ರಿಕೆಟ್ ವಲಯದಲ್ಲಿ ಸಖತ್ ಸದ್ದು ಮಾಡಿತ್ತು. ಮುಂಬೈ ರಣಜಿ ತಂಡದ ಮುಖ್ಯ ಕೋಚ್ ಆಗಿರುವ ಸಾಲ್ವಿ ಅವರ ಒಪ್ಪಂದ ಮುಂದಿನ ವರ್ಷ ಮಾರ್ಚ್‌ನಲ್ಲಿ ಕೊನೆಗೊಳ್ಳಲಿದೆ.
2005ರಲ್ಲಿ ರೈಲ್ವೇಸ್ ಪರ ಒಂದು ಪಂದ್ಯ ಆಡಿರುವ ಓಂಕಾರ್ ಅವರು ಕೇವಲ 1 ವಿಕೆಟ್ಅನ್ನು ಪಡೆದಿದ್ದಾರೆ. ಆ ನಂತರ ಅವರು ಕೋಚ್ ಆಗಿ ಹೆಚ್ಚು ಖ್ಯಾತಿ ಪಡೆದರು. ಓಂಕಾರ್ ಅವರ ತರಬೇತಿಯಲ್ಲಿ ಮುಂಬೈ ತಂಡವು ರಣಜಿ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಪಂಜಾಬ್ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದಿತ್ತು. ಇದಲ್ಲದೆ ಐಪಿಎಲ್ನಲ್ಲಿ (IPL) ಕಲ್ಕತ್ತಾ ನೈಟ್ರೈಡರ್ಸ್ ತಂಡದ ಸಹಾಯಕ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ಓಂಕಾರ್ (Omkar Salvi) ಅವರು ಇದೀಗ ಆರ್ಸಿಬಿ ತಂಡದ ಮುಖ್ಯ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಕಳೆದ ಸೀಸನ್‌ವರೆಗೂ ತಂಡದ ಫಿನಿಶರ್‌ನ ಪಾತ್ರ ನಿರ್ವಹಿಸುತ್ತಿದ್ದ ದಿನೇಶ್ ಕಾರ್ತಿಕ್ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆಂಡಿ ಫ್ಲವರ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ. ಇನ್ನೂ ರಿಟೇನ್ ಪಟ್ಟಿಗೆ ಬರುವುದಾದರೆ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಹಾಗೂ ಯಶ್ ದಯಾಳ್ರನ್ನು ತಂಡ ಉಳಿಸಿಕೊಂಡಿದೆ.