ರಿಯಾಲಿಟಿ ಶೋನಲ್ಲಿ ಜಡ್ಜ್​ಗಳು ಸುಮ್​ಸುಮ್ನೆ ಹೊಗಳಬೇಕಾ? ಸತ್ಯ ಬಿಚ್ಚಿಟ್ಟ ಸಿಂಗರ್

salim
Published on

ಮುಂಬೈ: ರಿಯಾಲಿಟಿ ಶೋಗಳು ಎಷ್ಟರ ಮಟ್ಟಿಗೆ ರಿಯಲ್ ಆಗಿರುತ್ತವೆ ಎನ್ನುವ ಪ್ರಶ್ನೆ ಈ ಹಿಂದೆಯಿಂದಲೂ ಇದ್ದೇ ಇದೆ. ಆದರೆ ಈ ಮಧ್ಯೆ ಹಿಂದಿಯ ಇಂಡಿಯನ್ ಐಡಲ್ 12 ಶೋ ಬಗ್ಗೆ ಭಾರೀ ವಿವಾದವೇ ಸೃಷ್ಟಿಯಾಗಿತ್ತು. ಆ ಶೋನಲ್ಲಿ ಸ್ಪರ್ಧಾಳುಗಳಿಗೆ ತೀರ್ಪುಗಾರರು ಯಾವುದೇ ಕಾರಣಕ್ಕೂ ನೆಗೆಟಿವ್ ಕಮೆಂಟ್ ನೀಡದೆ, ಕೇವಲ ಹೊಗಳುವುದನ್ನಷ್ಟೇ ಮಾಡಬೇಕು ಎಂದು ಮೊದಲೇ ಸೂಚಿಸಲಾಗಿರುತ್ತದೆ ಎಂದು ಸುದ್ದಿಗಳು ಹರಿದಾಡಿದ್ದವು. ಈ ವಿಚಾರವಾಗಿ ಖ್ಯಾತ ಗಾಯಕ ಸಲೀಂ ಮರ್ಚೆಂಟ್ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ ಸಲೀಂ, "ಈ ರೀತಿ ಹೊಗಳಲೇಬೇಕು ಎಂದು ಹೇಳುವುದಂತೂ ಸತ್ಯ. ನಾನು ಈ ಹಿಂದೆ ತೀರ್ಪುಗಾರನಾಗಿದ್ದಾಗ ನನಗೂ ಅದೇ ರೀತಿ ಹೇಳಲಾಗುತ್ತಿತ್ತು. ಯಾವುದೇ ಕಾರಣಕ್ಕೂ ನೆಗೆಟಿವ್ ಕಮೆಂಟ್ ಕೊಡಬೇಡಿ ಎಂದು ಹೇಳಲಾಗುತ್ತಿತ್ತು. ಆದರೆ ನನಗೆ ಅದು ಸಾಧ್ಯವಿರಲಿಲ್ಲ. ತಪ್ಪನ್ನು ಹೇಳಿದರೆ ಮಾತ್ರ ತಿದ್ದಿಕೊಳ್ಳಲು ಸಾಧ್ಯ ಎಂದು ಬಹಳ ಸೂಕ್ಷ್ಮವಾಗಿ ತಪ್ಪನ್ನು ಅರ್ಥ ಮಾಡಿಸುತ್ತಿದ್ದೆ. ಬಹುಶಃ ಅದೇ ಕಾರಣಕ್ಕೆ ನಾನು ಇಂದು ಯಾವುದೇ ರಿಯಾಲಿಟಿ ಶೋನ ತೀರ್ಪುಗಾರನಾಗಿ ಉಳಿದಿಲ್ಲ" ಎಂದು ಹೇಳಿದ್ದಾರೆ.

ಇತ್ತೀಚೆಗೆ ಇಂಡಿಯನ್ ಐಡಲ್ ಕಾರ್ಯಕ್ರಮದಲ್ಲಿ ಕಿಶೋರ್​ ಕುಮಾರ್​ಗೆ ನಮನ ಸಲ್ಲಿಸುವ ಸಲುವಾಗಿ ವಿಶೇಷ ಸಂಚಿಕೆಯನ್ನು ಏರ್ಪಡಿಸಲಾಗಿತ್ತು. ಅಮಿತ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವೀಕ್ಷಿಸಿದ ಅವರು, ಅಲ್ಲಿ ಎಲ್ಲರಿಗೂ ಹೊಗಳಬೇಕು ಎಂದು ಮೊದಲೇ ಹೇಳಿಕೊಡಲಾಗುತ್ತದೆ ಎಂದು ಹೇಳಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net