

ನವದೆಹಲಿ: ಲಡಾಖ್ನ ಪೂರ್ವಭಾಗದಲ್ಲಿ ಭಾರತದೊಂದಿಗೆ ತೀವ್ರವಾದ ಜಟಾಪಟಿಗೆ ಇಳಿದಿರುವ ಹಿನ್ನೆಲೆಯಲ್ಲಿ ಚೀನಾ ಕುರಿತ ತನ್ನ ವಿದೇಶಾಂಗ ನೀತಿಯನ್ನು ಬದಲಿಸಿಕೊಳ್ಳುವ ಒತ್ತಡಕ್ಕೆ ಪಾಕಿಸ್ತಾನ ಸಿಲುಕಿದೆ. ನೀತಿಯನ್ನು ಬದಲಿಸಿಕೊಳ್ಳದಿದ್ದರೆ ಚೀನಾದಂತೆ ಜಾಗತಿಕವಾಗಿ ಏಕಾಂಗಿಯಾಗುವ ಅಪಾಯವಿದೆ ಎಂದು ಪಾಕ್ನ ವಿದೇಶಾಂಗ ಸಚಿವಾಲಯ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಎಚ್ಚರಿಸಿದೆ.
ಗಲ್ವಾನ್ ಕಣಿವೆಯಲ್ಲಿ ಜೂ.15ರಂದು ಭಾರತೀಯ ಯೋಧರೊಂದಿಗೆ ಚೀನಾದ ಯೋಧರು ರಕ್ತಸಿಕ್ತ ಘರ್ಷಣೆ ಮಾಡಿದ ಮೇಲಂತೂ ಈ ಒತ್ತಡ ಮತ್ತಷ್ಟು ಹೆಚ್ಚಾಗಿರುವುದಾಗಿ ಹೇಳಲಾಗಿದೆ.
ಚೀನಾ ಕುರಿತ ವಿದೇಶಾಂಗ ನೀತಿಯನ್ನು ತ್ವರಿತವಾಗಿ ಬದಲಿಸಿಕೊಳ್ಳದಿದ್ದರೆ ಆರ್ಥಿಕ ಬಲಾಢ್ಯ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಭಾರತದೊಂದಿಗೆ ಚೀನಾದ ಘರ್ಷಣೆಯ ಬಳಿಕ ಹಾಗೂ ಕೋವಿಡ್-19 ಪಿಡುಗಿನ ಸಂದರ್ಭದಲ್ಲಿನ ಅದರ ಸಮ್ಮತವಲ್ಲದ ನಡವಳಿಕೆಗಳಿಂದಾಗಿ ಆ ಜಾಗತಿಕ ಶಕ್ತಿಗಳು ಚೀನಾವನ್ನು ಜಾಗತಿಕವಾಗಿ ಏಕಾಂಗಿಯನ್ನಾಗಿಸಲು ನಿರ್ಧರಿಸಿವೆ. ಇದರ ನೇರ ಪರಿಣಾಮವನ್ನು ಪಾಕಿಸ್ತಾನ ಅನುಭವಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿರುವುದಾಗಿ ಪಾಕ್ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಯುರೋಪ್ನಲ್ಲಿ ಪಾಕ್ ವಿಮಾನಗಳಿಗೆ ನಿಷೇಧ: ಚೀನಾವನ್ನು ಕಣ್ಮುಚ್ಚಿಕೊಂಡು ಬೆಂಬಲಿಸುತ್ತಿರುವುದಕ್ಕಾಗಿ ಪಾಕ್ಗೆ ಏನೆಲ್ಲ ಶಿಕ್ಷೆ ಕಾದಿದೆ ಎಂಬುದಕ್ಕೆ ಮೊದಲ ನಿದರ್ಶನವಾಗಿ, ಯುರೋಪ್ ಒಕ್ಕೂಟದಲ್ಲಿ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ವಿಮಾನ ಇಳಿಸುವುದನ್ನು ಯುರೋಪಿಯನ್ ಒಕ್ಕೂಟ ಸಂಪೂರ್ಣವಾಗಿ ನಿರ್ಬಂಧಿಸಿದೆ. ಪರಿಣತ ಪೈಲಟ್ಗಳೇ ಪಿಐಎ ವಿಮಾನವನ್ನು ಚಲಾಯಿಸುತ್ತಾರೆ ಎಂದು ಹೇಳಿ ಪಾಕಿಸ್ತಾನ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರೂ ಯುರೋಪಿಯನ್ ಒಕ್ಕೂಟ ಮಾತ್ರ ತನ್ನ ನಿಲುವನ್ನು ಬದಲಿಸಿಕೊಳ್ಳಲು ನಿರಾಕರಿಸುತ್ತಿದೆ.
ಭಾರತದ ವಿರುದ್ಧದ ಚೀನಾದ ನಿಲುವಿನ ಹಿನ್ನೆಲೆಯಲ್ಲಿ ಯುರೋಪ್ ರಾಷ್ಟ್ರಗಳು ಚೀನಾವನ್ನು ರಾಜತಾಂತ್ರಿಕವಾಗಿ ಏಕಾಂಗಿಯನ್ನಾಗಿಸುವ ಕ್ರಮಗಳನ್ನು ಕೈಗೊಳ್ಳಲಾರಂಭಿಸಿವೆ. ಇದರ ನೇರ ಪರಿಣಾಮ ಪಾಕಿಸ್ತಾನದ ಮೇಲಾಗಲಿದೆ ಎನ್ನಲಾಗಿದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ನ (ಸಿಪಿಇಸಿ) ಸೋಗಿನಲ್ಲಿ ಚೀನಾ ಈಗಾಗಲೆ ಪಾಕಿಸ್ತಾನದ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾದ ವಿರುದ್ಧ ಬಲೂಚಿಸ್ತಾನ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಲಾರಂಭಿಸಿದೆ. ಚೀನಿಯರು ಸಿಪಿಇಸಿ ಕಾಮಗಾರಿಗಳಲ್ಲಿ ತಮ್ಮದೇ ದೇಶದಿಂದ ಕಡಿಮೆ ಕೂಲಿಗೆ ಜನರನ್ನು ತಂದು ದುಡಿಸಿಕೊಳ್ಳುತ್ತಿದ್ದು, ಬಲೂಚ್ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನದ ಜನರಿಗೆ ಉದ್ಯೋಗವೇ ಇಲ್ಲವಾಗಿದೆ. ಇದು ಕೂಡ ಉರಿಯುತ್ತಿರುವ ಕೋಪದ ಬೆಂಕಿಗೆ ತುಪ್ಪ ಸುರಿದಿದೆ.
ಚೀನಾ ಈಗಾಗಲೆ ಭಾರತದ ಸಾಕಷ್ಟು ಪ್ರಮಾಣದ ಭೂಮಿಯನ್ನು ಅತಿಕ್ರಮಿಸಿಕೊಂಡಿದೆ. ಅದನ್ನು ನಿಯಂತ್ರಿಸದಿದ್ದರೆ ಪಾಕಿಸ್ತಾನದಲ್ಲೂ ಅದು ಭೂಮಿಯನ್ನು ಅತಿಕ್ರಮಿಸಿಕೊಳ್ಳಬಹುದು ಎಂದು ಪಾಕಿಸ್ತಾನದ ಕೆಲವು ಪ್ರತಿಷ್ಠಿತರು ಶಂಕೆ ವ್ಯಕ್ತಪಡಿಸಿದ್ದಾರೆ.