ಪ್ರಭಾಸ್​, ಮಹೇಶ್​ ಬಾಬು.. ಕರೀನಾ ಕಪೂರ್​​ಗೆ ಡಬಲ್​ ಆಫರ್​?

ವಿಜಯವಾಣಿ - 2024-09-19T110300.978
Published on

ಆಂಧ್ರಪ್ರದೇಶ: ಸೈನ್ಸ್​ ಫಿಕ್ಷನ್ ಆಧರಿತ ಪ್ಯಾನ್ ಇಂಡಿಯಾ 'ಕಲ್ಕಿ' ಚಿತ್ರ ಬಿಡುಗಡೆಗೊಂಡು ಇದೀಗ ಸೂಪರ್​ ಹಿಟ್​ ಸಾಲಿಗೆ ಸೇರಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಜತೆ ಬಾಕ್ಸ್​ ಆಫೀಸ್​ನಲ್ಲಿ ಲಾಭದಾಯಕ ಗಳಿಕೆ ಕಂಡಿತು. ಸದ್ಯ ಈ ಸಿನಿಮಾದ ಗೆಲುವಿನ ಮೂಲಕ ಸಿನಿರಸಿಕರಿಗೆ ಮತ್ತಷ್ಟು ಹತ್ತಿರವಾಗಿರುವ ಟಾಲಿವುಡ್​ ರೆಬೆಲ್​ ಸ್ಟಾರ್​ ಇದೀಗ ಮತ್ತೊಂದು ಬಿಗ್ ಪ್ರಾಜೆಕ್ಟ್​ನತ್ತ ಮುಖಮಾಡಿದ್ದಾರೆ. ಅಸಲಿಗೆ ಇದೊಂದು 'ಸ್ಪಿರಿಟ್​' ತುಂಬಿದ ಕಥೆ.

ಬಾಲಿವುಡ್​ ಸಿನಿ ಮೂಲಗಳ ಪ್ರಕಾರ, 'ಸ್ಪಿರಿಟ್'​ ಎಂಬ ಶೀರ್ಷಿಕೆಯಡಿ ಪ್ರಭಾಸ್​ ನಟಿಸುವ ಚಿತ್ರಕ್ಕೆ ಸ್ಟಾರ್​ ನಟಿ ಕರೀನಾ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಅಸಲಿಗೆ ಕರೀನಾ ಅವರೇ ಈ ಪ್ರಾಜೆಕ್ಟ್​ಗೆ ಅಂತಿಮವಾಗಿದ್ದಾರೆ. 'ಅನಿಮಲ್' ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ನಿರ್ದೇಶನದಲ್ಲಿ ಮೂಡಿಬರಲಿರುವ ಸ್ಪಿರಿಟ್​​ ಚಿತ್ರದಲ್ಲಿ ಪ್ರಭಾಸ್​ ಪ್ರಥಮ ಬಾರಿಗೆ ಖಾಕಿ ತೊಡಲಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಬಾಸ್​, ಮುಂದಿನ ವರ್ಷದಿಂದ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ.

ಪ್ರಭಾಸ್​ಗೆ ನಾಯಕಿಯಾಗಿರುವ ಕರೀನಾ ಕಪೂರ್​ ಅವರ ಪತಿ, ನಟ ಸೈಫ್​ ಅಲಿ ಖಾನ್ ಕೂಡ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರೊಟ್ಟಿಗೆ ಟಾಲಿವುಡ್​ನ ಮತ್ತೊಂದು ಚಿತ್ರಕ್ಕೂ ಕರೀನಾ ಅವರೇ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್​ ಅಂಗಳದಲ್ಲಿ ಭಾರೀ ಚರ್ಚೆಯಾಗುತ್ತಿದೆ. ತೆಲುಗು ನಟ ಮಹೇಶ್ ಬಾಬುಗೆ ಜೋಡಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ ಕರೀನಾ ಹೆಸರು ಟಾಲಿವುಡ್​ನಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದು, ಡಬಲ್ ಆಫರ್​ ಅವರ ಪಾಲಾಗಲಿದೆಯೇ ಎಂಬುದನ್ನು ಸದ್ಯ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net