

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟು ದಿನೇದಿನೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಲೇ ಇದೆ.
ನಿನ್ನೆಯಷ್ಟೇ ಸಿಎಂ ಅಶೋಕ್ ಗೆಹ್ಲೋಟ್ 109 ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ಶಕ್ತಿ ಪ್ರದರ್ಶಿಸಿದ್ದರು. ಶಾಸಕರು ರಾಜಭವನದ ಹುಲ್ಲುಹಾಸಿನ ಮೇಲೆಯೇ ಧರಣಿ ನಡೆಸಿ ಅಧಿವೇಶನಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರು.
ಕಾನೂನು ಅನ್ವಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದ ರಾಜ್ಯಪಾಲರು ಇಂದು ಕೂಡ ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದರ ನಡುವೆ ಅಧಿವೇಶನ ಆರಂಭಕ್ಕೆ ಮತ್ತೊಮ್ಮೆ ಅನುಮತಿ ಕೋರಿ ಸಿಎಂ ಗೆಹ್ಲೋಟ್ ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.
ರಾಷ್ಟ್ರಪತಿ ಭವನಕ್ಕೂ ಜನಪ್ರತಿನಿಧಿಗಳನ್ನು ಕರೆದೊಯ್ಯಲು ಸಿದ್ಧವಿರುವುದಾಗಿ ಸಿಎಂ ಅಶೋಕ್ ಗಹ್ಲೋಟ್ ಶಾಸಕರಿಗೆ ತಿಳಿಸಿದ್ದಾರೆ. ಬಿಜೆಪಿಯ ಷಡ್ಯಂತ್ರವನ್ನು ಸೋಲಿಸಲು ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಪ್ರತಿಭಟಿಸಲು ಸಜ್ಜಾಗಿರುವುದಾಗಿ ಗೆಹ್ಲೋಟ್ ಸವಾಲೆಸೆದಿದ್ದಾರೆ.
ಮಧ್ಯಾಹ್ನ ನಡೆದ ಶಾಸಕಾಂಗ ಸಭೆಯಲ್ಲಿ ಸಿಎಂ ಈ ಮಾತನ್ನು ಹೇಳಿದ್ದಾಗಿ ಕಾಂಗ್ರೆಸ್ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ. ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲು ತೆರಳುವ ಮುನ್ನ ಈ ಘೋಷಣೆ ಮಾಡಿದ್ದಾರೆ. ಹೀಗಾಗಿ ರಾಜ್ಯ ರಾಜಕೀಯ ಬೆಳವಣಿಗೆ ದೆಹಲಿ ಅಂಗಳಕ್ಕೆ ತೆರಳುತ್ತಾ ಎಂಬ ಕುತೂಹಲ ಮನೆ ಮಾಡಿದೆ.