ಭಾರತದಲ್ಲಿ ಅಡಗಿದ್ದಾಳೆ ಶ್ರೀಲಂಕಾ ಆತ್ಮಹತ್ಯಾ ಬಾಂಬರ್​​ನ ಪತ್ನಿ?

Srilanka bomber
Published on

ಕೊಲಂಬೋ: ಶ್ರೀಲಂಕಾದ ಚರ್ಚ್​ ಹಾಗೂ ಹೋಟೆಲ್​ಗಳ ಮೇಲೆ ದಾಳಿ ನಡೆಸಿದ ಸ್ಥಳೀಯ ಉಗ್ರ ಸಂಘಟನೆಯ ಆತ್ಮಹತ್ಯಾ ಬಾಂಬರ್​ನ ಪತ್ನಿ ಭಾರತದಲ್ಲಿ ಅಡಗಿದ್ದಾಳೆ ಎಂದು ಶಂಕಿಸಲಾಗಿದೆ.

ಕಳೆದ ವರ್ಷದ ಏಪ್ರಿಲ್​ 29ರಂದು 9 ಆತ್ಮಹತ್ಯಾ ಬಾಂಬರ್​ಗಳು ಮೂರು ಚರ್ಚ್​ ಹಾಗೂ ಕೊಲಂಬೋದ ಮೂರು ಲಕ್ಸುರಿ ಹೋಟೆಲ್​ಗಳ ಮೆಲೆ ದಾಳಿ ನಡೆಸಿದ್ದರು. ಇದರಲ್ಲಿ 11 ಭಾರತೀಯರು ಸೇರಿ 260ಕ್ಕೂ ಅಧಿಕ ಜನರು ಹತ್ಯೆಗೀಡಾಗಿದ್ದರು. ಐಸಿಸ್​ನ ಅಂಗಸಂಸ್ಥೆಯಾದ ಸ್ಥಳೀಯ ಉಗ್ರ ಸಂಘಟನೆ ನ್ಯಾಷನಲ್​ ತವಾಹೀದ್​ ಜಮಾತ್​ನ ಸದಸ್ಯರಾಗಿದ್ದರು. ಇದರಲ್ಲಿ ಒಬ್ಬನ ಪತ್ನಿ ಭಾರತದಲ್ಲಿ ತಲೆಮರೆಸಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಕರಾವಳಿಯ ನಗರವಾದ ನೆಗೆಂಬೋದಲ್ಲಿನ ಸೇಂಟ್​ ಸೆಬಾಸ್ಟೀನ್​ ಚರ್ಚ್​ನಲ್ಲಿ ಸ್ಫೋಟಿಸಿಕೊಂಡ ಆತ್ಮಹತ್ಯಾ ಬಾಂಬ್​ ದಾಳಿಕೋರ ಅಚ್ಚಿ ಮೊಹಮ್ಮದನ್​ ಪತ್ನಿ ಪುಲಸ್ತೀನಿ ರಾಜೇಂದ್ರನ್​ ಅಲಿಯಾಸ್​ ಸಾರಾ ಸೆಪ್ಟಂಬರ್​ನಲ್ಲಿಯೇ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ತೆರಳಿದ್ದಾಳೆ ಎಂದು ಹೇಳಲಾಗಿದೆ.

ಸಾರಾಳ ಪರಾರಿಗೆ ಸಹಕರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಖ್ಯ ತನಿಖಾಧಿಕಾರಿ ಅರ್ಜುನ್​ ಮಹೀನ್​ಕಂದಾ ತಿಳಿಸಿದ್ದಾರೆ. ಸರಣಿ ಬಾಂಬ್​ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ಪೊಲೀಸರು 200ಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ.

ಉಗ್ರ ಸಂಘಟನೆಯ ಅಡಗುತಾಣದಲ್ಲಿದ್ದ ಸಾರಾ ದಾಳಿ ಬಳಿಕ ಅಲ್ಲಿಂದ ಪಾರಾಗಿ ಪೂರ್ವ ಕರಾವಳಿಯ ಬಟ್ಟಿಕೊಲಾವಾ ನಗರದ ಮಾನ್​ಕಾಡು ಪ್ರದೇಶದಲ್ಲಿದ್ದಳು ಎಂಬ ಮಾಹಿತಿ ದೊರೆತಿತ್ತು.

ಸಾರಾಳ ಸಹೋದರ ಹಾಗೂ ಆಕೆಯ ಸಂಬಂಧಿಯೊಬ್ಬರ ಸಹಾಯದಿಂದ ಮನ್ನಾರ್ ಪ್ರದೇಶದಿಂದ ದೋಣಿಯಲ್ಲಿ ಭಾರತಕ್ಕೆ ತೆರಳಿದ್ದಾಳೆ ಎಂಬುದು ಗೊತ್ತಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net