ನದಿ ದಡದಲ್ಲಿ ಚಪ್ಪಲಿ ಇಟ್ಟು ಹೆಂಡತಿ ಕೊಟ್ಟ ಶಾಕ್​ಗೆ ಗಂಡನ ಪ್ರಾಣವೇ ಹೋಯ್ತು..!

Couple
Published on

ವಿಜಯವಾಡ: ಪತ್ನಿಯ ನಿರ್ಲಕ್ಷ್ಯದಿಂದಾಗಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಯರ್ರಮಸೆಟ್ಟಿ ವೆಂಕಟ ರವಿಕುಮಾರ್​ (28) ಮೃತ ದುರ್ದೈವಿ.

ವೆಂಕಟ ರವಿಕುಮಾರ್​, ಪುಷ್ಪಶಿವರನ್ನು ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದರು. ವೃತ್ತಿಯಲ್ಲಿ ಮೇಸನ್​ ಆಗಿರುವ ವೆಂಕಟ ರವಿಕುಮಾರ್​ ಪೂರ್ವ ಗೋದಾವರಿಯ ಮಂಡಿಕುಡುರು ಮಂಡಲದ ಪೆದ್ದಪಟ್ನಂ ಗ್ರಾಮದಲ್ಲಿ ವಾಸವಾಗಿದ್ದರು.

ದಂಪತಿ ಕಳೆದ ಭಾನುವಾರ ರಾತ್ರಿ 11 ಗಂಟೆಯವರೆಗೂ ಟಿವಿ ವೀಕ್ಷಣೆ ಮಾಡಿದ್ದಾರೆ. ರಾತ್ರಿ ಇಬ್ಬರ ನಡುವೆ ಏನು ನಡೆಯಿತೋ ಯಾರಿಗೂ ತಿಳಿದಿಲ್ಲ. ಆದರೆ, ಬೆಳಗಾಗುವಷ್ಟರಲ್ಲಿ ರವಿಕುಮಾರ್​ ಪತ್ನಿ ಪುಷ್ಪಶಿವ ಮನೆಯಲ್ಲಿ ಇರಲಿಲ್ಲ. ಇದರಿಂದ ಆತಂಕಗೊಂಡ ಆತ ಮನೆಯೆಲ್ಲ ಹುಡುಕಾಡಿದ್ದಾನೆ. ಎಲ್ಲಿ ಹೋಗಿರಬಹುದೆಂದು ನೋಡಲು ಹೊರ ಹೋಗಿದ್ದಾನೆ. ಈ ವೇಳೆ ಗೋದಾವರಿ ನದಿ ದಡದಲ್ಲಿ ಪತ್ನಿಯ ಚಪ್ಪಲಿಗಳು ಇರುವುದನ್ನು ನೋಡಿ ಅದನ್ನು ತೆಗೆದುಕೊಂಡು ಬಂದು ತನ್ನ ತಾಯಿಗೆ ತೋರಿಸಿದ್ದಾನೆ. ಆತನ ಪತ್ನಿಯದ್ದೇ ಎಂದು ತಾಯಿ ಖಚಿತಪಡಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ರವಿಕುಮಾರ್​ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಾನೆ.

ಬಳಿಕ ಬೈಕ್​ ತೆಗೆದುಕೊಂಡು ಮನೆಯಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಪಸ್ಸರ್ಲಪುಡಿಯ ಸೇತುವೆ ಬಳಿ ಹೋಗಿದ್ದಾನೆ. ನಂತರ ಬೈಕ್​ ನಿಲ್ಲಿಸಿ ಪತ್ನಿಯನ್ನು ಕಾಪಾಡುವ ಉದ್ದೇಶದಿಂದ ಗೋದಾವರಿ ನದಿಗೆ ಜಿಗಿದಿದ್ದು, ಅದನ್ನು ಸ್ಥಳೀಯ ಮೀನುಗಾರರು ಸಹ ನೋಡಿ ರಕ್ಷಣೆಗೂ ಯತ್ನಿಸಿದ್ದಾರೆ. ಆದರೆ, ರವಿಕುಮಾರ್​ ಸುಳಿವು ಸಿಗಲಿಲ್ಲ.

ಇತ್ತ ಪತ್ನಿ ಪುಷ್ಪಶಿವ ಯಾರಿಗೂ ಮಾಹಿತಿ ನೀಡದೇ ಪಲಕೋಲ್​ನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ಆದರೆ, ಪತ್ನಿಯ ಬಗ್ಗೆ ಮಾಹಿತಿ ತಿಳಿಯದೇ ನದಿಯ ದಡದಲ್ಲಿ ಆಕೆಯ ಚಪ್ಪಲಿಗಳು ಇರುವುದನ್ನು ನೋಡಿ ಚಿಂತೆಯಿಂದಲೇ ಆಕೆಯನ್ನು ಉಳಿಸಿಕೊಳ್ಳವ ಪ್ರಯತ್ನದಿಂದ ರವಿಕುಮಾರ್​ ನದಿಗೆ ಹಾರಿದ್ದ. ಇದೀಗ ಪತ್ನಿಯ ನಿರ್ಲಕ್ಯದಿಂದಾಗಿ ರವಿಕುಮಾರ್​ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಇಬ್ಬರ ವೈವಾಹಿಕ ಜೀವನದ ಸಾಕ್ಷಿಯಾಗಿ 11 ತಿಂಗಳ ಗಂಡು ಮಗು ಇದೆ. ತಿರುಪತಿಗೆ ಮುಡಿಕೊಡಲು ಜನವರಿ 20ಕ್ಕೆ ಟಿಕೆಟ್​ ಸಹ ಬುಕ್​ ಆಗಿದೆ. ಆದರೆ, ಅದಕ್ಕೂ ಮುನ್ನವೇ ದುರಂತವೇ ನಡೆದುಹೋಗಿದ್ದು, ರವಿಕುಮಾರ್​ ಮೃತದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net