

ಉತ್ತರ ಕನ್ನಡ: ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡ ಪತಿ ಆಕೆಯನ್ನು ಮಾರಕಾಸ್ತ್ರದಿಂದ ಮನಸೋ ಇಚ್ಛೆ ಕೊಚ್ಚಿಹಾಕಿ ಬಳಿಕ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಈ ದುರ್ಘಟನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ದುರಂತ ಅಂತ್ಯ ಕಂಡಿದ್ದು, ಮಕ್ಕಳೀಗ ಅನಾಥವಾಗಿವೆ.
ಹೊನ್ನಾವರದ ಮೇಲಿನ ಇಡಗುಂಜಿ ಬಳಿಯಲ್ಲಿ ದುರ್ಘಟನೆ ಸಂಭವಿಸಿದ್ದು, ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡ ಪುಟ್ಟ ಮಕ್ಕಳ ರೋದನ ಮುಗಿಲು ಮುಟ್ಟಿದೆ. ವೆಂಕಟೇಶ ನಾಯ್ಕ (38) ನೇಣಿಗೆ ಶರಣಾದವ. ಈತನ ಅಟ್ಟಹಾಸಕ್ಕೆ ಬಲಿಯಾದವಳು ಪತ್ನಿ ಶೈಲಾ ನಾಯ್ಕ (33).
ಪತ್ನಿ ಶೈಲಾ ನಾಯ್ಕಳ ಮೇಲೆ ಅನುಮಾನ ಪಡುತ್ತಿದ್ದ ಪತಿ ವೆಂಕಟೇಶ ಇದೇ ವಿಚಾರವಾಗಿ ನಿತ್ಯ ಗಲಾಟೆ ಮಾಡುತ್ತಿದ್ದ. ಶನಿವಾರ ಬೆಳಗ್ಗೆಯೂ ಕುಡಿದ ಅಮಲಿನಲ್ಲಿ ಪತ್ನಿ ಜತೆ ಜಗಳ ತೆಗೆದಿದ್ದ. ರೊಚ್ಚಿಗೆದ್ದ ಪತಿ, ಕತ್ತಿಯಿಂದ ಪತ್ನಿ ಮೇಲೆ ಹಲ್ಲೆ ಮಾಡಿ ಆಕೆಯೊಂದಿಗೆ ಮಕ್ಕಳನ್ನೂ ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ಬಳಿಕ ಅಡುಗೆ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗಂಭೀರ ಗಾಯಗೊಂಡು ನರಳಾಡುತ್ತಿದ್ದ ಪತ್ನಿ, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.