ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

Husband Wife (1)
Published on

ನವದೆಹಲಿ: ಗಂಡ ಒಳ್ಳೆಯವನೇ.. ಹೆಂಡತಿ-ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ. ಆದರೂ ಪತ್ನಿ ಆತನಿಂದ ವಿಮುಖಳಾಗಿರುತ್ತಾಳೆ ಇಲ್ಲವೇ ಬಿಟ್ಟುಹೋಗುತ್ತಾಳೆ. ಯಾಕೆ ಹೀಗೆ?

ಇಂಥ ದಾಂಪತ್ಯ ಪ್ರಕರಣಗಳಿಗೆ ಉತ್ತರವಾಗಿ ಇಲ್ಲೊಂದು ಅಧ್ಯಯನದಲ್ಲಿ ಮಹತ್ವದ ಅಂಶಗಳು ಕಂಡುಬಂದಿವೆ. ಅಮೆರಿಕದ ಮ್ಯಾರೇಜ್​ ಕೌನ್ಸೆಲರ್ ಜಸ್ಟಿಸ್​ ಸ್ಕ್ಯಾನ್​ಫಾರ್ಬರ್ ಬ್ಲಾಗ್​ನಲ್ಲಿ ಈ ಅಧ್ಯಯನದ ಅಂಶಗಳು ಪ್ರಕಟಗೊಂಡಿದೆ. ಇದರಲ್ಲಿನ ಕೆಲವು ಅಂಶಗಳು ವಿವಾಹಿತ ಪುರುಷರಿಗೆ ಕಿವಿಮಾತು ಎಂದರೂ ಸರಿಯೇ, ಎಚ್ಚರಿಕೆ ಎಂದರೂ ಸರಿಯೇ ಎನ್ನಲಾಗಿದೆ.

ಪತಿಯನ್ನು ಪ್ರೀತಿಸುತ್ತಿದ್ದರೂ ಪತ್ನಿ ಯಾಕೆ ಆತನಿಂದ ವಿಮುಖಳಾಗುತ್ತಾಳೆ ಇಲ್ಲವೇ ಆತನನ್ನು ಬಿಟ್ಟು ಹೋಗುತ್ತಾಳೆ ಎಂಬುದಕ್ಕೆ ಈ ಅಧ್ಯಯನ ಪ್ರಮುಖ ಕಾರಣವೊಂದನ್ನು ಬಹಿರಂಗಪಡಿಸಿದೆ. ಜಸ್ಟಿಸ್​ ಸ್ಕ್ಯಾನ್​ಫಾರ್ಬರ್ ಬ್ಲಾಗ್​ನ ಈ ಪೋಸ್ಟ್ ವೈರಲ್ ಕೂಡ ಆಗಿದೆ.

ಇಂಥ ದಾಂಪತ್ಯದಲ್ಲಿನ ವಿರಸಕ್ಕೆ ಪ್ರಮುಖ ಕಾರಣ ಪತಿಯ ಭಾವನಾತ್ಮಕ ಅನುಪಸ್ಥಿತಿ. ಪತಿ ಭಾವುಕನಾಗಿ ಪತ್ನಿಗೆ ಸಮಯ ಕೊಡದಿರುವುದೇ ಆಕೆ ಆತನನ್ನು ಪ್ರೀತಿಸುತ್ತಿದ್ದರೂ ಆತನಿಂದ ವಿಮುಖಳಾಗಲು ಇಲ್ಲವೇ ಬಿಟ್ಟುಹೋಗಲು ಕಾರಣ ಎಂದು ಈ ಅಧ್ಯಯನ ಹೇಳಿದೆ.

ಸಾಂಸಾರಿಕ ಜೀವನದಲ್ಲಿ ಪತಿ ಭಾವನಾತ್ಮಕವಾಗಿ ಪತ್ನಿಯೊಂದಿಗೆ ಒಂದಷ್ಟು ಸಮಯವನ್ನಾದರೂ ಕಳೆಯದಿರುವುದೇ ಈ ದೊಡ್ಡ ಸಮಸ್ಯೆಗೆ ಕಾರಣ ಎಂಬುದು ಕಂಡುಬಂದಿದೆ. ಅದೇ ಕಾರಣಕ್ಕೆ ಪತಿ ಒಳ್ಳೆಯವನಾಗಿದ್ದರೂ, ಪತ್ನಿ-ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ಪತ್ನಿಗೂ ಆತನ ಮೇಲೆ ಪ್ರೀತಿ ಇದ್ದರೂ ಆಕೆ ಭಾವನಾತ್ಮಕವಾಗಿ ಆತನಿಂದ ವಿಮುಖಳಾಗಿರುತ್ತಾಳೆ. ಕೆಲವೊಂದು ವಿಪರೀತ ಪರಿಸ್ಥಿತಿಯಲ್ಲಿ ಬಿಟ್ಟುಕೂಡ ಹೋಗುತ್ತಾಳೆ ಎಂದು ಈ ಅಧ್ಯಯನ ಹೇಳಿದೆ.

ಎಷ್ಟೋ ಸಂದರ್ಭದಲ್ಲಿ ಪತಿ ಪತ್ನಿಯೊಂದಿಗೆ ಭೌತಿಕವಾಗಿ ಉಪಸ್ಥಿತನಿದ್ದರೂ, ಆಕೆಯೊಂದಿಗೆ ಕಾಲ ಕಳೆಯುತ್ತಿದ್ದರೂ, ಆತ ಆಕೆಯೊಂದಿಗೆ ಭಾವನಾತ್ಮಕವಾಗಿ ಸ್ಪಂದಿಸುತ್ತಿರುವುದಿಲ್ಲ. ಉತ್ತಮ ದಾಂಪತ್ಯಕ್ಕೆ ದಿನದಲ್ಲಿ ಆಗಾಗ ಕನಿಷ್ಠ ಐದು ನಿಮಿಷಗಳಷ್ಟಾದರೂ ಪತ್ನಿ ಮೇಲೆ ಸಂಪೂರ್ಣ ಕೇಂದ್ರೀಕೃತ ಭಾವನಾತ್ಮಕ ಸ್ಪಂದನೆ ಅತಿಮುಖ್ಯ ಎಂದು ಈ ಅಧ್ಯಯನ ಹೇಳಿದೆ.

ಇಂಥ ಸಂದರ್ಭಗಳಲ್ಲಿ ಯಾರಾದರೂ ಸ್ವಲ್ಪೇ ಸ್ವಲ್ಪ ನಮಗೆ ಪ್ರೀತಿ ತೋರಿಸಿದರೂ ಅದು ನಮ್ಮನ್ನು ಸುಲಭದಲ್ಲಿ ಅವರನ್ನು ಹಚ್ಚಿಕೊಳ್ಳುವಂತೆ ಮಾಡಿಬಿಡುತ್ತದೆ ಎಂಬ ಆತಂಕಕಾರಿ ಅಂಶವನ್ನೂ ಕೆಲವು ಪತ್ನಿಯರು ವ್ಯಕ್ತಪಡಿಸಿದ್ದಾಗಿ ಈ ಅಧ್ಯಯನ ತಿಳಿಸಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net