'ನಬನ್ನಾ'ವನ್ನು ಇಂದು ನಾಳೆ ಮುಚ್ಚಿರುವುದೇಕೆ?: ಬಿಜೆಪಿ ಯುವಮೋರ್ಚಾದ ನಬನ್ನಾ ಚಲೋಕ್ಕೆ ಬೆದರಿದರೇ ದೀದಿ?!

Nabanna,_HRBC_building_at_Howrah
Published on

ಕೋಲ್ಕತ: ಬಿಜೆಪಿ ಕಾರ್ಯಕರ್ತರ ಹತ್ಯೆ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕರೆ ನೀಡಿದ್ದ #ನಬನ್ನಾಚಲೋ (#NabannoCholo) ರ‍್ಯಾಲಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ನಡುಕ ಹುಟ್ಟಿಸಿದೆಯೇ?! ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರತಿರೋಧ ಹೆಚ್ಚಾಗುತ್ತಿರುವುದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸಿದೆಯೇ? ಬಿಜೆಪಿ ರ‍್ಯಾಲಿ ಘೋಷಣೆಯಾದ ಬಳಿಕ ನಿನ್ನೆ ಸರ್ಕಾರ ದಿಢೀರ್ ಆಗಿ ಸಂಪೂರ್ಣ ನಬನ್ನಾವನ್ನು ಇಂದು ಮತ್ತು ನಾಳೆಯ ಮಟ್ಟಿಗೆ ಬಂದ್ ಮಾಡಿರುವುದಾಗಿ ಘೋಷಿಸಿದೆ!

ದೀದಿ ಸರ್ಕಾರ ಕಚೇರಿ ಬಂದ್ ಮಾಡಿರುವುದಕ್ಕೆ ಸ್ಯಾನಿಟೈಸೇಷನ್ ಕಾರಣ ನೀಡಿ ಪ್ರಕಟಣೆಯನ್ನು ಹೊರಡಿಸಿದೆ. ನಬನ್ನಾ ಭವನದ ಪ್ರೆಸ್ ಕಾರ್ನರ್ ಕೂಡ ಬಂದ್ ಆಗಿರಲಿದೆ ಎಂದು ಅದು ಸ್ಪಷ್ಟಪಡಿಸಿದೆ. ಯುವ ಮೋರ್ಚಾದ ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ರ‍್ಯಾಲಿ ನಡೆದಿದ್ದು, ಬಿಜೆಪಿಯ ಎಲ್ಲ ಘಟಕದವರೂ ಪಾಲ್ಗೊಂಡಿದ್ದಾರೆ.

ಏನಿದು ನಬನ್ನಾ ಭವನ?: ಹೌರಾ ಜಿಲ್ಲೆಯ ಹೌರಾ ನಗರದಲ್ಲಿರುವ ನಬನ್ನಾ ಭವನ ಆಡಳಿತ ಕಚೇರಿಗಳ ಸಚಿವಾಲಯ. ಶಿಬ್​ಪುರದ ಮಂದಿರತಲ್​ ಎಂಬಲ್ಲಿದ್ದು, 14 ಮಹಡಿಗಳ ಕಟ್ಟಡವಾಗಿದೆ. ಪಶ್ಚಿಮ ಬಂಗಾಳದ ಸೆಕ್ರಟೇರಿಯೆಟ್ ತಾತ್ಕಾಲಿಕವಾಗಿ ಇಲ್ಲಿಂದಲೇ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2013ರ ಅಕ್ಟೋಬರ್ 5ರಂದು ಇದನ್ನು ಉದ್ಘಾಟಿಸಿದರು. ಮುಖ್ಯಮಂತ್ರಿ ಕಚೇರಿ ಈ ಕಟ್ಟಡದ 14ನೇ ಮಹಡಿಯಲ್ಲಿದೆ. ನಬನ್ನಾ ಎಂಬ ಪದಕ್ಕೆ ಬಂಗಾಳಿ ಭಾಷೆಯಲ್ಲಿ ಹೊಸ ಕೊಯ್ಲು ಎಂಬ ಅರ್ಥವಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net