ಕಾಂಗ್ರೆಸ್ ಹಿಂದೂ ವಿರೋಧಿ ಏಕೆ? ಶಾಸಕ ಯತ್ನಾಳ್ ನೀಡಿದ ಪ್ರಮುಖ ಕಾರಣಗಳಿವು!

ಯತ್ನಾಳ್
Published on

ಬೆಂಗಳೂರು: ಕಾಂಗ್ರೆಸ್​ ಪಕ್ಷದ ವಿರುದ್ಧ ಸದಾ ಗುಟುರು ಹಾಕುತ್ತಿರುವ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಕಾಂಗ್ರೆಸ್​ ವಿರುದ್ಧ ಕಿಡಿಕಾಡಿದ್ದಾರೆ. ಕಾಂಗ್ರೆಸ್​ ಪಕ್ಷ ಹಿಂದೂ ವಿರೋಧಿ ಏಕೆ? ಎಂಬುದನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದಾರೆ.

ಆರ್ಟಿಕಲ್ 25 ರ ಮೂಲಕ ಮತಾಂತರವನ್ನು ಕಾನೂನುಬದ್ಧಗೊಳಿಸಿತು. ಆರ್ಟಿಕಲ್ 28 ರ ಮೂಲಕ ಹಿಂದೂಗಳ ಧಾರ್ಮಿಕ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡು, ಮುಸಲ್ಮಾನರಿಗೆ ಹಾಗೂ ಕ್ರೈಸ್ತರಿಗೆ ಆರ್ಟಿಕಲ್ 30ರ ಮೂಲಕ ಧಾರ್ಮಿಕ ಶಿಕ್ಷಣದ ಹಕ್ಕನ್ನು ನೀಡಿತು. ಎಚ್​ಆರ್​ಸಿಇ ಕಾಯ್ದೆ 1951 ಮೂಲಕ ನಮ್ಮ ದೇವಸ್ಥಾನದ ಹಣವನ್ನು ತೆಗೆದುಕೊಂಡಿದೆ ಎಂದು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಿಂದೂ ಕುಟುಂಬಗಳನ್ನು ವಿಭಜಿಸಲು, ಒಗ್ಗಟ್ಟನ್ನು ಮುರಿಯಲು ಡೈವೋರ್ಸ್ ಆಕ್ಟ್, ಡೌರಿ ಕಾಯ್ದೆ, ಹಿಂದೂ ಕೋಡ್ ಬಿಲ್ ಅನ್ನು ಪರಿಚಯಿಸಿದರು. ಆದರೆ, ಮುಸಲ್ಮಾನರ ಪರ್ಸನಲ್ ಲಾ ಬೋರ್ಡ್ ಅನ್ನು ಮುಟ್ಟುವ ಧೈರ್ಯಕ್ಕೆ ಹೋಗಲಿಲ್ಲ, ಬಹುಪತ್ನಿತ್ವ ಕಾನೂನುಬದ್ಧ ಆಗಿರುವುದರಿಂದ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಯಿತು ಎಂದು ಆರೋಪ ಮಾಡಿದರು.

ಸ್ಪೆಷಲ್ ಮ್ಯಾರೇಜ್ ಆಕ್ಟ್ ಅನ್ನು 1951 ರಲ್ಲಿ ಪರಿಚಯಿಸುವ ಮೂಲಕ ಮುಸಲ್ಮಾನ ಗಂಡು ಮಕ್ಕಳು, ಹಿಂದೂ ಯುವತಿಯರನ್ನು ವಿವಾಹ ಮಾಡಿಕೊಳ್ಳುವ ಅವಕಾಶ ನೀಡಿದೆ. 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಪರಿಚಯಿಸಿ ಮಾಧ್ಯಮಗಳ ಹಕ್ಕನ್ನು ಕಿತ್ತೆಸೆಯಲಾಯಿತು. ಸಾವಿರಾರು ಜನರನ್ನು ಜೈಲಿಗಟ್ಟಿದರು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಸಾವಿರಾರು ಜನ ಅಮಾಯಕರನ್ನು ಜೈಲಿಗೆ ಕಳುಹಿಸಿದ್ದು ಇದೆ ಕಾಂಗ್ರೆಸ್ ಪಕ್ಷ ಎಂದು ಕಿಡಿಕಾಡಿದರು.

ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ಮೂಲಕ ಹಿಂದೂಗಳ 40000 ದೇವಸ್ಥಾನಗಳನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ. ವಕ್ಫ್​ ಕಾಯ್ದೆ ಮೂಲಕ ಯಾವುದೇ ಭೂಮಿಯನ್ನು ಮುಸಲ್ಮಾನರು ತೆಗೆದುಕೊಳ್ಳುವ ಹಕ್ಕನ್ನು ಪಡೆದರು. 2009 ರಲ್ಲಿ ಕೇಸರಿ ಭಯೋತ್ಪಾದನೆ ಎಂಬ ಪದಪುಂಜವನ್ನು ಪರಿಚಯಿಸಿದರು ಎಂದು ಬಿಜೆಪಿ ಶಾಸಕ ಯತ್ನಾಳ್​ ಕಿಡಿಕಾಡಿದರು.

ಕಾಂಗ್ರೆಸ್​ ಪತ್ರಕರ್ತರ ಕ್ಷಮೆಯಾಚಿಸಲಿ: ಯತ್ನಾಳ್​

ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಡಿಯೋ ತಿರುಚಿದ್ದಲ್ಲ, ನಕಲಿಯಲ್ಲವೆಂದು ಎಫ್‌ಎಸ್‌ಎಲ್‌ ವರದಿ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಹಾಗಿದ್ದಾಗ ಎಫ್‌ಎಸ್‌ಎಲ್‌ ವರದಿಯನ್ನು ಬಹಿರಂಗಪಡಿಸದಿರುವುದು ಯಾವ ಕಾರಣಕ್ಕೆ? ಆರೋಪಿಗಳಿಗೆ ಸಹಾಯ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆಯೇ ಎಂದು ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆದ ನಾಲ್ಕು ದಿನಗಳ ನಂತರ ಆರೋಪಿಗಳನ್ನು ಬಂಧಿಸಲಾಗಿದೆ, ಇವರನ್ನು ರಕ್ಷಣೆ ಮಾಡುತ್ತಿರುವವರು ಯಾರು. ಘಟನೆ ನಡೆದ ಕೂಡಲೇ ಅದು ಪಾಕಿಸ್ತಾನದ ಪರ ಘೋಷಣೆಯಲ್ಲವೆಂದು ಸರ್ಟಿಫಿಕೇಟ್ ಕೊಟ್ಟ ಕಾಂಗ್ರೆಸ್ ನಾಯಕರು ಹಾಗು ಕೆಲವು ವರದಿಗಾರರು ಮತ್ತು ನಾಡಿನ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net