

ಹೈದರಾಬಾದ್: ನಿನ್ನೆ (ಆ.25) ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸಂಬಂಧಿಸಿದ ಮಾದಾಪುರದಲ್ಲಿರುವ ಎನ್ ಕನ್ವೆನ್ಷನ್ ಹಾಲ್ ಅನ್ನು ಹೈಡ್ರಾ ( ಹೈದ್ರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಮತ್ತು ಅಸೆಟ್ಸ್ ಮಾನಿಟರಿಂಗ್ ಮತ್ತು ಪ್ರೊಟೆಕ್ಷನ್) ಅಧಿಕಾರಿಗಳು ನೆಲಸಮ ಮಾಡುವ ಮೂಲಕ ನಟನಿಗೆ ಖಡಕ್ ಎಚ್ಚರಿಕೆ ರವಾನಿಸಿದರು. ಈ ಕುರಿತು ಸ್ವತಃ ನಾಗಾರ್ಜುನ ಅವರೇ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದು ಬೇಸರ ಹೊರಹಾಕಿದರು. ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ಏಕೆ ಯಾವ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿಲ್ಲ? ಒಂದು ಮಾತು ಕೂಡ ವ್ಯಕ್ತಪಡಿಸಿಲ್ಲ? ಇದರ ಹಿಂದೆ ಬೇರೆ ಏನಾದರೂ ಕಾರಣವಿದೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಆಗ್ರಹ
ಅಕ್ರಮವಾಗಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಈ ಕನ್ವೆನ್ಷನ್ ಹಾಲ್ನ ಕಟ್ಟಲಾಗಿದೆ ಎಂಬ ಕಾರಣದಡಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಹೈಡ್ರಾ ಪ್ರಾಜೆಕ್ಟ್ ನಿನ್ನೆ ಧ್ವಂಸಗೊಳಿಸಿತು. ಹೈಕೋರ್ಟ್ಗೆ ತೆರಳಿ, ತಕ್ಷಣವೇ ಮಧ್ಯಂತರ ತಡೆಯಾಜ್ಞೆ ತರುವುದರೊಳಗೆ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿತ್ತು. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಟ, ಕಾನೂನಿನ ಮುಖಾಂತರ ಮನವಿ ಸಲ್ಲಿಸಲು ಹೋದರೂ ಕೂಡ ಹೀಗಾಗಿದ್ದು ನಿಜಕ್ಕೂ ನೋವು ತಂದಿದೆ ಎಂದರು.
ಇನ್ನು ನಾಗಾರ್ಜುನ ಪರ ಧ್ವನಿ ಎತ್ತಿದ ಫ್ಯಾನ್ಸ್, ಈ ವಿಷಯದಲ್ಲಿ ಏಕೆ ಒಬ್ಬ ಸ್ಟಾರ್ ನಟ ಕೂಡ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಅಸಲಿಗೆ ತೆಲುಗು ಚಿತ್ರರಂಗ ಈ ವಿಚಾರದಲ್ಲಿ ಮೌನ ತಾಳಲು ಇರುವುದು ಒಂದೇ ಒಂದು ಕಾರಣ. ಇದೊಂದು ಖಾಸಗಿ ವಿಷಯವಾದ ಹಿನ್ನೆಲೆ ಯಾರೊಬ್ಬರು ಸಹ ನಟನ ಪರ ಅಥವಾ ವಿರೋಧ ಮಾತನಾಡಲು ಬಯಸಿಲ್ಲ. ಇದು ನಾಗಾರ್ಜುನ ಮತ್ತು ಸರ್ಕಾರದ ನಡುವಿನ ಸಮಸ್ಯೆಯಾಗಿದೆ. ಹೀಗಾಗಿ ಈ ವಿಷಯದಲ್ಲಿ ಯಾರು ತುಟಿಬಿಚ್ಚುವ ಧೈರ್ಯ ಮಾಡಿಲ್ಲ,(ಏಜೆನ್ಸೀಸ್).