

Gas Cylinders : ಕಾಲ ಬದಲಾದಂತೆ ಸೌದೆ ಒಲೆಗೆ ಗುಡ್ಬೈ ಹೇಳಿ ಇಂದು ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಮೇಲೆಯೇ ಜನರು ಹೆಚ್ಚು ಅವಲಂಬಿತರಾಗಿದ್ದಾರೆ. ನಗರದಲ್ಲಿ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಈಗ ಎಲ್ಲೇ ನೋಡಿದರೂ ಗ್ಯಾಸ್ ಸಿಲಿಂಡರ್ ಬಳಕೆ ಸಾಮಾನ್ಯವಾಗಿಬಿಟ್ಟಿದೆ. ಗ್ಯಾಸ್ ಸಿಲಿಂಡರ್ ಇಲ್ಲದ ಮನೆಯೇ ಇಲ್ಲ ಎನ್ನುವಂತಾಗಿದೆ.
ನೀವು ಖರೀದಿಸುವ ಗೃಹಬಳಕೆಯ ಗ್ಯಾಸ್ ಸಿಲಿಂಡರ್ನ ಬಣ್ಣ ಯಾವಾಗಲೂ ಕೆಂಪು ಬಣ್ಣದ್ದಾಗಿರುತ್ತದೆ. ಗ್ಯಾಸ್ ಸಿಲಿಂಡರ್ ಏಕೆ ಕೆಂಪು ಬಣ್ಣದ್ದಾಗಿದೆ ಎಂದು ಎಂದಾದರು ನೀವು ಯೋಚಿಸಿದ್ದೀರಾ? ಪ್ರತಿದಿನ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದರೂ ಸಿಲಿಂಡರ್ ಬಣ್ಣ ಏಕೆ ಕೆಂಪಗಿದೆ ಎಂದು ಪ್ರಶ್ನೆ ಮಾಡಿದರೆ ಬಹುತೇಕರು ಗೊತ್ತಿಲ್ಲ ಎಂದೇ ಹೇಳುತ್ತಾರೆ. ಚಿಂತಿಸಬೇಡಿ ಇದಕ್ಕೆ ಉತ್ತರ ತುಂಬಾ ಸರಳವಾಗಿದೆ.
ಕೆಂಪು ಬಣ್ಣವನ್ನು ದೂರದಿಂದಲೇ ಬೇಗನೆ ಗುರುತಿಸಬಹುದು. ಇದರ ಜೊತೆಗೆ, ಗ್ಯಾಸ್ ಸಿಲಿಂಡರ್ಗಳು ದೊಡ್ಡ ಅಪಾಯವನ್ನು ಉಂಟುಮಾಡಬಹುದು. ಕೆಂಪು ಬಣ್ಣವನ್ನು ಅಪಾಯದ ಸಂಕೇತವಾಗಿಯೂ ಬಳಸಲಾಗುತ್ತದೆ. ಅದಕ್ಕಾಗಿಯೇ ಸಿಲಿಂಡರ್ಗಳಿಗೆ ಹೆಚ್ಚಾಗಿ ಕೆಂಪು ಬಣ್ಣವನ್ನು ನೀಡಲಾಗುತ್ತದೆ.
ಇನ್ನು ನೀಲಿ ಬಣ್ಣದ ಸಿಲಿಂಡರ್ಗಳು ಸಹ ಲಭ್ಯವಿದೆ. ಅದೇ ತರ್ಕವು ಅವುಗಳಿಗೂ ಅನ್ವಯಿಸುತ್ತದೆ. ಏಕೆಂದರ,ಎ ನೀಲಿ ಬಣ್ಣವನ್ನು ಬಹಳ ಬೇಗನೆ ಗುರುತಿಸಬಹುದು. ಗ್ಯಾಸ್ ಸಿಲಿಂಡರ್ನ ಬಣ್ಣವು ಒಳಗಿನ ಅನಿಲವನ್ನು ಅವಲಂಬಿಸಿ ಬದಲಾಗುತ್ತದೆ. ಹೀಲಿಯಂ ತುಂಬಿದ ಸಿಲಿಂಡರ್ನ ಬಣ್ಣವು ಕಂದು ಬಣ್ಣದ್ದಾಗಿರುತ್ತದೆ. ಕಾರ್ಬನ್ ಡೈಆಕ್ಸೈಡ್ ಸಿಲಿಂಡರ್ ಬೂದು ಬಣ್ಣದ್ದಾಗಿರುತ್ತದೆ. ಸಿಲಿಂಡರ್ನ ಬಣ್ಣವನ್ನು ಹೀಗೆ ನಿರ್ಧರಿಸಲಾಗುತ್ತದೆ.
ಅಂದಹಾಗೆ ಗ್ಯಾಸ್ ಸಿಲಿಂಡರ್ ಬಳಸುತ್ತಿರುವವರು ಕೆಲವೊಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು. ಹಾಗಾದರೆ ಗ್ಯಾಸ್ ಸಿಲಿಂಡರ್ ದಿನ ಬಾಳಿಕೆ ಬರಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.
ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯುವಾಗ ಸರಿಯಾದ ಡಿಲರ್ಸ್ಗಳನ್ನು ಸಂಪರ್ಕಿಸುವುದು ಉತ್ತಮ. ನಿಮ್ಮ ಮನೆಗೆ ಸಿಲಿಂಡರ್ ಡಿಲವರಿ ಆದಾಗ ಕಂಪನಿ ಸೀಲ್ ಸರಿಯಾಗಿ ಇದೆಯೇ, ಇಲ್ಲವೇ ಅನ್ನೋದನ್ನು ದೃಢಪಡಿಸಿಕೊಳ್ಳಿ. ಒಂದುವೇಳೆ ಸೀಲ್ ಇಲ್ಲದಿದ್ದರೆ ಆ ಸಿಲಿಂಡರ್ ಅನ್ನು ಬಳಸಬೇಡಿ. ಅದರ ಜತೆಗೆ ಸಿಲಿಂಡರ್ ಮೇಲೆ ದಿನಾಂಕವನ್ನು ಖಚಿತಪಡಿಸಿಕೊಳ್ಳಿ. A ಎಂದರೆ ಜನವರಿಯಿಂದ ಮಾರ್ಚ್ವರೆಗೆ, B ಎಂದರೆ ಏಪ್ರಿಲ್ನಿಂದ ಜೂನ್ವರೆಗೆ, C ಎಂದರೆ ಜುಲೈನಿಂದ ಸೆಪ್ಟೆಂಬರ್ವರೆಗೆ ಮತ್ತು D ಅಂದರೆ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ಎಂದರ್ಥ.
ಅಡುಗೆ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ
* ಅಡುಗೆ ಮನೆಯಲ್ಲಿ ಒಳ್ಳೆಯ ಗಾಳಿಯ ಸೌಲಭ್ಯ ಇರಬೇಕು
* ಅಡುಗೆ ಮಾಡುವಾಗ ಬಾಗಿಲು, ಕಿಟಕಿಗಳು ತೆಗೆದಿರಲಿ
* ಬೆಂಕಿ ಪಟ್ಟಣದಂತಹ ವಸ್ತುಗಳನ್ನು ದೂರವಿಡಿ
* ಅಡುಗೆ ಮಾಡುವ ಸಮಯದಲ್ಲಿ ಸ್ಟವ್ ಬಳಿ ಬಟ್ಟೆಗಳನ್ನು ಇಡಬೇಡಿ
* ಸಿಲಿಂಡರ್ ಬಳಸದಿದ್ದಾಗ ರೆಗ್ಯೂಲೆಟರ್ ಆಫ್ ಮಾಡಿ
* ಗಾಳಿ ಆಡುವ ಪ್ರದೇಶದಲ್ಲಿ ಸಿಲಿಂಡರ್ ಅನ್ನು ಇಡಿ
* ವರ್ಷಕ್ಕೊಮ್ಮೆ ರೆಗ್ಯೂಲೆಟರ್, ಟ್ಯೂಬ್ ಬದಲಾಯಿಸಿ
* ISI ಸರ್ಟಿಫೈಡ್ ಸಿಲಿಂಡರ್ ಅನ್ನು ಮಾತ್ರ ಬಳಸಿ
* ಗ್ಯಾಸ್ ಸಿಲಿಂಡರ್ ಅನ್ನು ಮಲಗಿಸಿ ಇಡಬೇಡಿ
* ಸಿಲಿಂಡರ್ಗೆ ಹಾನಿಯಾಗುವಂತಹ ಕೆಲಸವನ್ನು ಮಾಡಬೇಡಿ
ನೀವು ಸಿಲಿಂಡರ್ ಬಳಸುವಾಗ ಒಂದುವೇಳೆ ಅವಘಡ ಸಂಭವಿಸಿದರೆ ಕೂಡಲೇ ರೆಗ್ಯೂಲೆಟರ್ ಅನ್ನು ಆಫ್ ಮಾಡಿ. ಬಾಗಿಲು ಹಾಗೂ ಕಿಟಕಿಗಳನ್ನು ಪೂರ್ತಿಯಾಗಿ ತೆಗೆಯಿರಿ. ಅಗ್ನಿ ಅವಘಕ್ಕೆ ಕಾರಣವಾಗುವ ವಸ್ತುಗಳನ್ನ ಬಳಸಬೇಡಿ. ಉದಾಹರಣೆಗೆ ಬೆಂಕಿ ಕಡ್ಡಿ ಹಚ್ಚಬೇಡಿ ಮತ್ತು ಮನೆಯಲ್ಲಿರುವ ಎಲ್ಲಾ ಕರೆಂಟ್ ಸ್ವಿಚ್ಗಳನ್ನು ಆಫ್ ಮಾಡಿ. ಈ ಟಿಪ್ಸ್ಗಳನ್ನು ಪಾಲಿಸುವುದರಿಂದ ಬೆಂಕಿ ಅನಾಹುತ ಸಂಭವಿಸಿದ ಸಮಯದಲ್ಲಿ ಪ್ರಾಣ ಹಾನಿಯನ್ನು ತಪ್ಪಿಸಬಹುದು. (ಏಜೆನ್ಸೀಸ್)