148 ವರ್ಷದ ಟೆಸ್ಟ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬ್ಯಾಟಿಂಗ್​ನಲ್ಲಿ ವಿಶ್ವದಾಖಲೆ ಬರೆದ ಬೌಲರ್​ಗಳು! Test Cricket

Test Cricket
Published on

Test Cricket : 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಕುತೂಹಲಕಾರಿ ಘಟನೆ ನಡೆದಿದೆ. ಅದೇನೆಂದರೆ, ಒಂದೇ ಇನ್ನಿಂಗ್ಸ್‌ನಲ್ಲಿ ಕೊನೆಯ ಮೂವರು ಆಟಗಾರರು ಮೊದಲ ಎಂಟು ಆಟಗಾರರಿಗಿಂತ ಹೆಚ್ಚು ರನ್ ಗಳಿಸಿದರು.

ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಮುಕ್ತಾಯಗೊಂಡ ಟೆಸ್ಟ್ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ ಆಡುವ ಹನ್ನೊಂದರಲ್ಲಿ ಕೊನೆಯ ಮೂವರು ಆಟಗಾರರಾದ ಗುಡಕೇಶ್ ಮೋತಿ, ಜೋಮೆಲ್ ವಾರಕನ್ ಮತ್ತು ಜೇಡನ್ ಸೀಲ್ಸ್ ಕ್ರಮವಾಗಿ 19, 31 (ಔಟಾಗದೆ) ಮತ್ತು ಜೇಡನ್ ಸೀಲ್ಸ್ 22 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಯಾರು ಕೂಡ ಅವರಿಗಿಂತ ಹೆಚ್ಚು ರನ್ ಗಳಿಸಿಲ್ಲ. ಅಗ್ರ-8 ಬ್ಯಾಟ್ಸ್‌ಮನ್‌ಗಳಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಕೇವಲ 11 ರನ್‌ಗಳು ಮಾತ್ರ. ಆರಂಭಿಕರಾಗಿ ಕಣಕ್ಕಿಳಿದ ಕ್ರೈಗ್ ಬ್ರಾಥ್‌ವೈಟ್ ಮತ್ತು ಎಂಟನೇ ಕ್ರಮಾಂಕದ ಕೆವಿನ್ ಸಿಂಕ್ಲೇರ್ ತಲಾ 11 ರನ್ ಗಳಿಸಿದರು. ಉಳಿದ ಆರು ಆಟಗಾರರು ಒಂದು ಅಂಕಿಯ ಸ್ಕೋರ್‌ಗಳಿಗೆ ಸೀಮಿತರಾದರು.

ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 66 ರನ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ, ಕೊನೆಯ ಮೂವರು ಬ್ಯಾಟ್ಸ್‌ಮನ್‌ಗಳು ಎರಡಂಕಿಯ ರನ್​ ಗಳಿಸುವ ಮೂಲಕ ತಮ್ಮ ತಂಡವನ್ನು ಮೂರು-ಅಂಕಿಯ ಸ್ಕೋರ್ (137) ದಾಟಿಸಿದರು. ಇಲ್ಲಿ ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ವೆಸ್ಟ್ ಇಂಡೀಸ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟಾಪ್ ಸ್ಕೋರರ್‌ಗಳಾಗಿದ್ದ ಕೊನೆಯ ಮೂವರು ಆಟಗಾರರು ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಖಾತೆಯನ್ನೇ ತೆರೆಯಲಿಲ್ಲ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ತಾನದ ವಿರುದ್ಧ ಹೀನಾಯವಾಗಿ ಸೋತರೂ, ವೆಸ್ಟ್ ಇಂಡೀಸ್ ಬೌಲರ್‌ಗಳು ಬ್ಯಾಟಿಂಗ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದರು.

ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಕೊನೆಯ ಇಬ್ಬರು ಬ್ಯಾಟ್ಸ್‌ಮನ್‌ಗಳು ಮತ್ತೊಂದು ದಾಖಲೆಯನ್ನು ಸ್ಥಾಪಿಸಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೊನೆಯ ಇಬ್ಬರು ಬ್ಯಾಟ್ಸ್‌ಮನ್‌ಗಳು (ಜೋಮೆಲ್ ವಾರಕನ್ ಔಟಾಗದೆ 31 ಮತ್ತು ಜೇಡನ್ ಸೀಲ್ಸ್ 22 ರನ್​) ಇನ್ನಿಂಗ್ಸ್‌ನಲ್ಲಿ ಟಾಪ್ ಸ್ಕೋರರ್‌ಗಳಾಗಿರುವುದು ಇದು ಮೂರನೇ ಬಾರಿ.

ಪಂದ್ಯದ ವಿಷಯಕ್ಕೆ ಬಂದರೆ, ಪಾಕಿಸ್ತಾನವು ಮುಲ್ತಾನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 127 ರನ್‌ಗಳಿಂದ ಗೆದ್ದುಕೊಂಡಿತು. ಕೇವಲ ಮೂರು ದಿನಗಳಲ್ಲಿ ಕೊನೆಗೊಂಡ ಈ ಪಂದ್ಯದಲ್ಲಿ, ಪಾಕಿಸ್ತಾನದ ಸ್ಪಿನ್ ತ್ರಿವಳಿಗಳಾದ ಸಾಜಿದ್ ಖಾನ್ (9 ವಿಕೆಟ್‌ಗಳು), ನೌಮನ್ ಅಲಿ (6 ವಿಕೆಟ್‌ಗಳು) ಮತ್ತು ಅಬ್ರಾರ್ ಅಹ್ಮದ್ (5 ವಿಕೆಟ್‌ಗಳು) ಒಟ್ಟು 20 ವಿಕೆಟ್‌ಗಳನ್ನು ಕಬಳಿಸಿದರು.

ವೆಸ್ಟ್ ಇಂಡೀಸ್ ತಂಡವು ಎರಡು ಇನ್ನಿಂಗ್ಸ್‌ಗಳಲ್ಲಿ 137 ಮತ್ತು 123 ರನ್‌ಗಳಿಗೆ ಸೀಮಿತವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 230 ರನ್‌ಗಳಿಗೆ ಆಲೌಟ್ ಆಗಿದ್ದ ಪಾಕಿಸ್ತಾನ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 157 ರನ್‌ಗಳನ್ನು ಗಳಿಸಿತು. ಈ ಪಂದ್ಯದಲ್ಲಿ, ವೆಸ್ಟ್ ಇಂಡೀಸ್‌ನ ಸ್ಪಿನ್ನರ್ ಜೋಮೆಲ್ ವಾರಿಕ್ 10 ವಿಕೆಟ್‌ಗಳನ್ನು ಕಬಳಿಸಿದರು. ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯೂ ದಾಖಲಾಗಿದೆ. ಈ ಪಂದ್ಯವು ಪಾಕಿಸ್ತಾನ ನೆಲದಲ್ಲಿ ಅತ್ಯಂತ ಕಡಿಮೆ ಟೆಸ್ಟ್ ಪಂದ್ಯ (ಚೆಂಡುಗಳ ವಿಷಯದಲ್ಲಿ) ಎಂಬ ದಾಖಲೆಗೆ ಪಾತ್ರವಾಯಿತು. ಈ ಪಂದ್ಯವು ಕೇವಲ 1064 ಎಸೆತಗಳಲ್ಲಿ ಕೊನೆಗೊಂಡಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net