

ಬೆಂಗಳೂರು: 20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ದೀರಿ. ಆದ್ರೂ ಯಾಕಿಂಗಾಯ್ತು. ಇಷ್ಟೆಲ್ಲಾ ಅವ್ಯವಸ್ಥೆ ಯಾಕಾಯ್ತು ಎಂದು ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಶಾಸಕರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಗೃಹ ಕಚೇರಿ ಕೃಷ್ಣದಲ್ಲಿ ಮೈಸೂರು ಅಭಿವೃದ್ಧಿ ಸಂಬಂಧ ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದರು.
ಮೈಸೂರಿನ ಖಾಸಗಿ ಬಡಾವಣೆಗಳಲ್ಲಿನ ಮೂಲಭೂತ ಸವಲತ್ತುಗಳ ಕೊರತೆ, ಕಳಪೆ ನಿರ್ವಹಣೆ, ನೀರು-ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವ ಬಗ್ಗೆ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅಲ್ರೀ ಎಲ್ಲಾ ಪಕ್ಷದ ಶಾಸಕರು ನೀವುಗಳೇ ಸುಮಾರು 20 ವರ್ಷಗಳಿಂದ ಮುಡಾ ಸದಸ್ಯರಿದ್ದೀರಿ. ನೀವುಗಳು ಸದಸ್ಯರಾಗಿದ್ದೂ ಯಾಕಿಂಗಾಯ್ತು? ಯಾಕೆ ಅವ್ಯವಸ್ಥೆ ಆಗಲು ಬಿಟ್ಟಿದ್ದೀರಿ ಎಂದು ಸಿಎಂ ಕೇಳಿದರು.
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ತ್ವರಿತವಾಗಿ ಆಗದೆ ಕುಂಟುತ್ತಿರುವ ಬಗ್ಗೆ ಕೇಂದ್ರದ ಮತ್ತು ರಾಜ್ಯದ ಅಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಕೇಂದ್ರದ ಸಚಿವರಿಗೆ ವಿವರವಾದ ಪತ್ರ ಬರೆಯಲು ಮತ್ತು ಅನುಷ್ಠಾನ ಕುರಿತು ಕೇಂದ್ರ ವಿಮಾನಯಾನ ಸಚಿವರನ್ನು ಜ.15 ರಂದು ಭೇಟಿಯಾಗಿ ಮಾತುಕತೆ ನಡೆಸಲು ತೀರ್ಮಾನಿಸಿದರು.
ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಲಿದೆ.ಯೋಜನೆಯಡಿ ಇನ್ನೂ 46 ಎಕ್ರೆ ಭೂಸ್ವಾಧೀನ ಆಗಬೇಕಿದೆ. ಈಗಾಗಲೇ 111 ಎಕ್ರೆ ಭೂಸ್ವಾಧೀನಕ್ಕೆ ಪಾವತಿ ಮಾಡಲಾಗಿದೆ. ಇನ್ನೂ 95 ಎಕ್ರೆ ಪಾವತಿ ಆಗಬೇಕಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಶಿಥಿಲಗೊಂಡಿರುವ ಲಾನ್ಸ್‌ಡೌನ್ ಕಟ್ಟಡವನ್ನು ತೆರವುಗೊಳಿಸಿ ಅದೇ ಮಾದರಿಯಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಈ ಕುರಿತಾದ ಎಲ್ಲಾ ಕಾನೂನು ತೊಡಕುಗಳನ್ನು ಬಗೆಹರಿಸಬೇಕು. ಶಿಥಿಲ ಪರಿಸ್ಥಿತಿಯಲ್ಲಿರುವ ದೇವರಾಜ ಅರಸು ಮಾರುಕಟ್ಟೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.
ಮೈಸೂರು ನಗರ ಹಾಗೂ ಹೊಸದಾಗಿ ನಿರ್ಮಿಸಲಾಗಿರುವ ಬಡಾವಣೆಗಳಲ್ಲಿ ಒಳಚರಂಡಿ ನಿರ್ಮಾಣ, ಕೊಳಚೆ ನೀರು ಸಂಸ್ಕರಣೆ ಯೋಜನೆ ಜಾರಿಗೆ ರೂ.670 ಕೋಟಿ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಅದನ್ನು ಸಂಪುಟದ ಮುಂದೆ ಮಂಡಿಸಲು ಸೂಚನೆ ಸೇರಿದಂತೆ ಇತರ ಅಭಿವೃದ್ಧಿ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.