

ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಹುರಿಯಾಳುಗಳು ಸಿದ್ಧವಾಗಿದ್ದು, ಪ್ರವಾರ ಭರಾಟೆ ಶುರುವಾಗಲಿದೆ. ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಶುಕ್ರವಾರ, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳೂ ಸೇರಿ ಹಲವರು ಉಮೇದುವಾರಿಕೆ ಸಲ್ಲಿಸಿದರು.
ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯ ರಮೇಶ ಭೂಸನೂರ, ಕಾಂಗ್ರೆಸ್ನ ಅಶೋಕ ಮನಗೂಳಿ, ಜೆಡಿಎಸ್ನ ನಾಜಿಯಾ ಅಂಗಡಿ, ಪಕ್ಷೇತರ ಅಭ್ಯರ್ಥಿಗಳಾಗಿ ಅಬ್ದುಲ್ ರೆಹಮಾನ ದುಂಡಸಿ, ಜಿಲಾನಿ ಮುಲ್ಲಾ, ರಾಷ್ಟ್ರೀಯ ಸಮಾಜ ಪಕ್ಷದಿಂದ ವಿಕ್ರಮ ಪಂಡಿತ ನಾಮಪತ್ರ ಸಲ್ಲಿಸಿದ್ದಾರೆ.
ಹಾನಗಲ್ಲ ಕ್ಷೇತ್ರಕ್ಕೆ 29 ಅಭ್ಯರ್ಥಿಗಳಿಂದ 45 ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿಯಿಂದ ಶಿವರಾಜ ಸಜ್ಜನರ, ಕಾಂಗ್ರೆಸ್ನಿಂದ ಶ್ರೀನಿವಾಸ ಮಾನೆ, ಲೋಕಶಕ್ತಿ ಪಕ್ಷದಿಂದ ಶಿವಕುಮಾರ ತಳವಾರ, ಜೆಡಿಎಸ್ನಿಂದ ನಿಯಾಜ್ ಶೇಖ್ ಸೇರಿ 29 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಅ.11ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.13 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಅ.30ರಂದು ಮತದಾನ ಹಾಗೂ ನ.2ರಂದು ಮತಎಣಿಕೆ ಕಾರ್ಯ ನಡೆಯಲಿದೆ.
ಬಿಜೆಪಿ ಆಕ್ರೋಶ ಶಮನ: ಹಾನಗಲ್ಲ ಉಪಚುನಾವಣೆಗೆ ಬಿಜೆಪಿಯಿಂದ ಶಿವರಾಜ ಸಜ್ಜನರ ಅವರನ್ನು ಅಭ್ಯರ್ಥಿ ಎಂದು ಘೊಷಣೆ ಮಾಡುತ್ತಿದ್ದಂತೆ ಕ್ಷೇತ್ರದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಸಂಸದ ಶಿವಕುಮಾರ ಉದಾಸಿ ಅವರ ಮನವೊಲಿಕೆಯಿಂದ ಒಂದೇ ದಿನದಲ್ಲಿ ಬಂಡಾಯ ಶಮನಗೊಂಡಿದೆ.
ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ. ನಾನು ಹಾಗೂ ವಿಜಯೇಂದ್ರ ಎರಡೂ ಕ್ಷೇತ್ರಗಳ ಪ್ರಚಾರಕ್ಕೆ ಹೆಚ್ಚು ಸಮಯ ನೀಡುತ್ತೇವೆ. ಪಕ್ಷ ಸೂಚಿಸಿದಾಗ ಪ್ರಚಾರಕ್ಕೆ ತೆರಳುತ್ತೇವೆ. ಬೆಲೆ ಏರಿಕೆ ಈ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ.
| ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ
ಭಾರಿ ಕುಳ ಭೂಸನೂರ: ಸಿಂದಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಕೋಟಿ ಒಡೆಯ. ಬೆಳ್ಳಿ, ಬಂಗಾರ, ಡೈಮಂಡ್, ಬೆಲೆಬಾಳುವ ಕಾರು ಸೇರಿ ಬ್ಯಾಂಕ್ ಖಾತೆ, ಎಲ್ಐಸಿ, ಷೇರು ಒಳಗೊಂಡು ಒಟ್ಟು 52,35,000 ರೂ.ಮೌಲ್ಯದ ಚರಾಸ್ತಿ ಹೊಂದಿದ್ದು, ಪತ್ನಿ ಹೆಸರಲ್ಲಿ 32,70,000 ರೂ. ಚರಾಸ್ತಿ ಇದೆ. ಸದ್ಯಕ್ಕೆ ಅವರ ಬಳಿ 3 ಲಕ್ಷ ರೂ., ಪತ್ನಿ ಬಳಿ 1 ಲಕ್ಷ ನಗದು ಇದೆ. 92,32,000 ರೂ.ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಹೆಸರಲ್ಲಿ 1,07,74,000 ರೂ.ಮೌಲ್ಯದ ಸ್ಥಿರಾಸ್ತಿ ಇದೆ.
ಮನಗೂಳಿ ಕೋಟಿ ಒಡೆಯ: ಸಿಂದಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಕೋಟಿ ಒಡೆಯ. ಚಿನ್ನ, ಬೆಳ್ಳಿ ಆಭರಣ, ಬೆಲೆಬಾಳುವ ಕಾರು, ಕೇಂದ್ರ, ಸಹಕಾರಿ ಬ್ಯಾಂಕ್, ಅಂಚೆ ಕಚೇರಿ ಖಾತೆ ಸೇರಿ ವಿವಿಧ ಮೂಲಗಳಲ್ಲಿ ಸ್ವಂತ ಹೆಸರಲ್ಲಿ 33,46,765 ರೂ. ಹಾಗೂ ಪತ್ನಿ ಹೆಸರಲ್ಲಿ 60,52,713 ರೂ. ಚರಾಸ್ತಿ ಇದೆ. ನಿವೇಶನ, ಜಮೀನು, ಕಟ್ಟಡಗಳು ಸೇರಿ ಸ್ವಂತ ಹೆಸರಲ್ಲಿ ಒಟ್ಟು 6,36,00,000 ರೂ. ಹಾಗೂ ಪತ್ನಿ ಹೆಸರಲ್ಲಿ 3,25,000 ರೂ.ಮೌಲ್ಯದ ಸ್ಥಿರಾಸ್ತಿ ಇದೆ.
ಹಾವೇರಿ: ಹಾನಗಲ್ಲ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಕುಟುಂಬದವರ ಬಳಿ ಒಟ್ಟು 7 ಕೋಟಿ ರೂ. ಚರಾಸ್ತಿ ಹಾಗೂ 6.48 ಕೋಟಿ ರೂ. ಸ್ಥಿರಾಸ್ತಿ ಇದೆ. ಸಜ್ಜನರ ಬಳಿ 1 ಲಕ್ಷ ರೂ., ಪತ್ನಿ ಬಳಿ 50 ಸಾವಿರ, ಇಬ್ಬರು ಮಕ್ಕಳ ಬಳಿ ತಲಾ 25 ಸಾವಿರ ರೂ. ನಗದಿದೆ. ಫಾರ್ಚೂನ್ ಕಾಟನ್ ಅಗ್ರೋ ಇಂಡಸ್ಟ್ರೀಯಲ್ಲಿ ಮೊದಲ ಮಗ 6.44 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಸಜ್ಜನರಲ್ಲಿ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ. ಪತ್ನಿ ಬಳಿ 20.25 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನಾಭರಣ, 3 ಕೆಜಿ ಬೆಳ್ಳಿ ಆಭರಣವಿದೆ. ಇಬ್ಬರು ಮಕ್ಕಳು, ತಾಯಿ ಸೇರಿ ಮೂವರು ಅವಲಂಬಿತರಲ್ಲಿ ತಲಾ 2.50 ಲಕ್ಷ ರೂ. ಮೌಲ್ಯದ 50 ಗ್ರಾಂ ಚಿನ್ನಾಭರಣವಿದೆ. ಸಜ್ಜನರಲ್ಲಿ ಒಟ್ಟು 16.87 ಲಕ್ಷ ಮೌಲ್ಯದ ಚರಾಸ್ತಿ, ಪತ್ನಿ ಬಳಿ 24.29 ಲಕ್ಷ ರೂ., ಹಿರಿಯ ಪುತ್ರ ಶರತ್ ಬಳಿ 6.47 ಕೋಟಿ ರೂ., ಎರಡನೇ ಮಗ ಸಾಗರ ಬಳಿ 3.72 ಲಕ್ಷ, ತಾಯಿ ಗಿರಿಜಮ್ಮ ಬಳಿ 8.03 ಲಕ್ಷ ರೂ. ಮೌಲ್ಯದ ಚರಾಸ್ತಿಯಿದೆ. 10 ಲಕ್ಷ ರೂ.ನ ಇನ್ನೋವಾ ಕಾರು, ಒಂದು ಸ್ಕೂಟಿ ಸೇರಿ ಒಟ್ಟು 7 ಲಕ್ಷ ರೂ. ಮೌಲ್ಯದ ಚರಾಸ್ತಿಯನ್ನು ಸಜ್ಜನರ ಕುಟುಂಬ ಹೊಂದಿದೆ. ಶಿವರಾಜ ಸಜ್ಜನರ ದೇವಗಿರಿಯಲ್ಲಿ 20 ಎಕರೆ ಕೃಷಿ ಭೂಮಿ, ಬೆಂಗಳೂರಿನಲ್ಲಿ ನಿವೇಶನ ಹೊಂದಿದ್ದಾರೆ. ತಾಯಿ ಗಿರಿಜಮ್ಮ ಹೆಸರಿನಲ್ಲಿ 34 ಎಕರೆ ಕೃಷಿ ಭೂಮಿ ಹಾಗೂ ಪತ್ನಿ, ಮಕ್ಕಳ ಹೆಸರಿನಲ್ಲಿ ಹಾವೇರಿ ತಾಲೂಕು ಹಾಗೂ ಬೆಂಗಳೂರಿನಲ್ಲಿ ನಿವೇಶನಗಳಿವೆ. 52 ಲಕ್ಷ ರೂ. ಸಾಲವನ್ನು ಹೊಂದಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಬಳಿ ಸ್ಥಿರಾಸ್ತಿ ಇಲ್ಲ: ಹಾನಗಲ್ಲ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಇ ಪದವೀಧರರಾಗಿದ್ದಾರೆ. ಅವರ ಬಳಿ 25 ಸಾವಿರ ನಗದು, 27,380 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಬಳಿ 1.33 ಲಕ್ಷ ರೂ. ಮೌಲ್ಯದ ಆಭರಣವಿದೆ. ಯಾವುದೇ ಸ್ಥಿರಾಸ್ತಿ ಇಲ್ಲ. 8.62 ಲಕ್ಷ ರೂ. ಶೈಕ್ಷಣಿಕ ಸಾಲ ಪಡೆದಿದ್ದಾರೆ.