

ಬೆಂಗಳೂರು: ತಾರಾ ದಂಪತಿ ಆಗಿದ್ದ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಕುರಿತ ವಿಚಾರ ದಿನೇದಿನೆ ಸಿನಿಪ್ರಿಯರ ಹಾಗೂ ಅವರ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾ ಬೆಳವಣಿಗೆಗಳು ಗೋಚರಿಸುತ್ತಿವೆ.
ಈ ನಡುವೆ ಅವರ ದಾಂಪತ್ಯ ಮುರಿದು ಬಿದ್ದುದರ ಕುರಿತು ಸಾಕಷ್ಟು ವಿಷಯಗಳು ಹರಿದಾಡುತ್ತಿದ್ದು, ಅವೆಲ್ಲದರ ಕುರಿತು ಇದೀಗ ನಟಿ ಸಮಂತಾ ಖುದ್ದು ಉತ್ತರ ನೀಡಿದ್ದಾರೆ. ವೈಯಕ್ತಿಕವಾಗಿ ತೇಜೋವಧೆ ಆಗುವಂಥ ಆರೋಪಗಳಿಗೂ ಆಕೆ ದಿಟ್ಟ ಉತ್ತರವನ್ನೇ ನೀಡಿದ್ದಾರೆ. ಮಾತ್ರವಲ್ಲ ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಬರಲಿದೆ ಕಬ್ಜ ಪಾರ್ಟ್ 2!; ಎರಡನೇ ಭಾಗದ ಕಥೆ ಕೂಡ ಸಿದ್ಧ
'ವೈಯಕ್ತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಮ್ಮೆಲ್ಲರ ಭಾವನಾತ್ಮಕ ಬೆಂಬಲ ನನ್ನನ್ನು ಸಂತೋಷದಲ್ಲಿ ಇರಿಸಿದೆ. ನನ್ನ ವಿರುದ್ಧ ವದಂತಿಗಳು ಹರಿದಾಡುತ್ತಿದ್ದ ಸಂದರ್ಭದಲ್ಲೂ ನನ್ನ ಕುರಿತು ಕಾಳಜಿ ತೋರಿದ, ನನ್ನನ್ನು ಬೆಂಬಲಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು' ಎಂದು ಸಮಂತಾ ಹೇಳಿಕೊಂಡಿದ್ದಾರೆ.
'ವಿಚ್ಛೇದನವೆಂಬುದೇ ಒಂದು ಅತ್ಯಂತ ನೋವಿನ ಪ್ರಕ್ರಿಯೆ. ಅಂಥದ್ದರ ನಡುವೆಯೂ ನನಗೆ ಅಫೇರ್ಸ್ ಇತ್ತು, ಮಕ್ಕಳನ್ನು ಬಯಸಿರಲಿಲ್ಲ, ನಾನು ಅವಕಾಶವಾದಿ, ನನಗೆ ಗರ್ಭಪಾತ ಆಗಿತ್ತು ಎಂದೆಲ್ಲ ಸುದ್ದಿ ಹಬ್ಬಿಸಿದ್ದರು. ಅವೆಲ್ಲದರಿಂದ ಆಗಿರುವ ನೋವಿನಿಂದ ಹೊರಬರಲು ನಾನು ಒಂಟಿಯಾಗಿ ಇರಲು ಬಯಸುತ್ತೇನೆ. ನನ್ನ ವಿರುದ್ಧ ನಡೆದ ವೈಯಕ್ತಿಕ ದಾಳಿ ನಿಜವಾಗಿಯೂ ಕಠೋರವಾದದ್ದು. ಆದರೆ ಅವರು ಇದುವರೆಗೆ ಮಾಡಿರುವ ಅಥವಾ ಇನ್ನು ಮುಂದೆ ಹಬ್ಬಿಸುವ ಆರೋಪಗಳು ನನ್ನನ್ನು ಕುಗ್ಗಿಸಲಾರವು, ಅದರಿಂದ ನಾನೆಂದಿಗೂ ಕುಗ್ಗುವುದಿಲ್ಲ ಎಂದು ಪ್ರಮಾಣ ಮಾಡಿ ಹೇಳುತ್ತೇನೆ' ಎಂಬುದಾಗಿ ಸಮಂತಾ ಟೀಕೆಗಳಿಗೆ ಎದಿರೇಟು ನೀಡಿದ್ದಾರೆ.