

ಬೆಂಗಳೂರು: ಒಂದು ಕಡೆ ಲಾಕ್ಡೌನ್, ಮತ್ತೊಂದೆಡೆ ರೂಪಾಂತರಿ ವೈರಸ್ ಅಲೆಗಳ ಹಿನ್ನಲೆಯಲ್ಲಿ ಎರಡು ವರ್ಷಗಳಿಂದ ಬೇಸತ್ತ ಜನತೆ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಪಿಕ್ನಿಕ್-ಟೂರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಅನೇಕರು ಏನೂ ಬೇಡ, ಕಾಡಿಗೆ ಹೋಗಿ ಬರುವ ಅನ್ನುವುದು ನೀವು ಕೇಳಿರಬಹುದು. ದಿನನಿತ್ಯದ ಜೀವನದ ಜಂಜಾಟದಲ್ಲಿ ಟ್ರೆಕ್ಕಿಂಗ್ ಹವ್ಯಾಸ ದೇಹಕ್ಕೆ, ಮನಸ್ಸಿನ ಆರೋಗ್ಯಕ್ಕೆ ಸಹಕಾರಿ ಎಂಬುದವರ ಅನಿಸಿಕೆ. ಬೆಟ್ಟ-ಗುಡ್ಡ ಹತ್ತುವ, ನದಿಯಲ್ಲಿ ವಿಹರಿಸುವ, ಕಾಡುಗಳಲ್ಲಿ ನಡೆದುಕೊಂಡು ಹೋಗುವ ಅನುಭವ ಚಾರಣಿಗರಿಗೆ ಮಾತ್ರ ಗೊತ್ತು. ದಟ್ಟ ಕಾನನದ ಸೌಂದರ್ಯ ಮನಸಾರೆ ಆನಂದಿಸಿ. ದೇಹಕ್ಕೂ, ಮನಸ್ಸಿಗೂ ವಿಶ್ರಾಂತಿ ಬಯಸುವ ಚಾರಣ ಯಾವತ್ತೂ ಸುರಕ್ಷಿತವಾಗಿರಲಿ ಎಂಬುದು ಈ ಲೇಖನದ ಉದ್ದೇಶ.
ಬಹುತೇಕ ಚಾರಣ ಪ್ರಿಯರು ಪ್ರಕೃತಿ ಸೌಂದರ್ಯ ಸವಿಯಲೆಂದು ಕಾಡು-ಮೇಡು ಸುತ್ತಾಡುತ್ತಾರೆ. ಫ್ಯಾಮಿಲಿ, ಫ್ರೆಂಡ್ಸ್, ಸಹೋದ್ಯೋಗಿಗಳು ಹೀಗೆ ತಂಡವಾಗಿ ಚಾರಣಕ್ಕೆ ಹೊರಡುತ್ತಾರೆ. ಧೈರ್ಯ, ಸಾಹಸ, ಆತ್ಮವಿಶ್ವಾಸ, ನಾಯಕತ್ವ ಬೆಳೆಸುವಲ್ಲಿ, ಭವಿಷ್ಯದಲ್ಲಿ ಅದನ್ನು ಅನುಷ್ಠಾನಗೊಳಿಸಲು ಚಾರಣ ಸಹಕಾರಿ ಆಗಿದೆ ಅನ್ನುವುದು ಚಾರಣಿಗರ ಮಾತು.
ಚಾರಣದ ವೇಳೆಯಲ್ಲಿ ಚಾರಣಿಗರು ಅಗತ್ಯವಾಗಿ ಬೇಕಾದ ಆಹಾರ ಪದಾರ್ಥಗಳನ್ನು ಕೊಂಡೊಯ್ಯಬೇಕು. ವಿಶ್ರಾಂತಿ ಪಡೆಯಲು ಬೇಕಾದ ಸರಂಜಾಮುಗಳು ಜತೆಗಿರಬೇಕು. ಚಾರಣದ ದಿನಗಳ ಸಂಖ್ಯೆ ಹೆಚ್ಚಾದಂತೆ ಹೊರಬೇಕಾದ ಸಾಮಗ್ರಿ ಸಂಖ್ಯೆ ಅಧಿಕ ಎಂದೇ ಅರ್ಥ. ಹಾಗಾಗಿ ಎಲ್ಲ ಯೋಜನೆ ಸಿದ್ಧಪಡಿಸಿದ ಮೇಲೆಯೇ ಹೊರಡಬೇಕು.
ಚಾರಣದ ಕೆಲವು ಸ್ಥಳಗಳಿಗೆ ದಾರಿ ಇರುತ್ತದೆ. ದಾರಿ ಇಲ್ಲದ ಪ್ರದೇಶಕ್ಕೆ ಪರ್ಯಾಯ ಹಾದಿ ಕುರಿತಂತೆ ನಕ್ಷೆ ಮತ್ತು ದಿಕ್ಸೂಚಿಗಳ ಸಹಾಯದಿಂದ ಗುರಿ ಮುಟ್ಟಬೇಕು. ಅತ್ಯಂತ ನಿರ್ಜನ ಪ್ರದೇಶ, ಸಂಚಾರವೇ ಕಷ್ಟಕರ ಎಂಬ ಕಡೆಗಳಲ್ಲಿ ಮಾರ್ಗದರ್ಶಿಗಳ ಸಹಾಯ ಪಡೆದೇ ತೆರಳಬೇಕು. ಇದರಿಂದ ಚಾರಣಿಗರ ಸುರಕ್ಷತೆ ಕಾಪಾಡಿಕೊಳ್ಳಲು ಸಾಧ್ಯವಿದೆ. ಫೋಟೋ-ವಿಡಿಯೋ ಮಾಡುವ ಭರದಲ್ಲಿ ಒಂದು ತಪ್ಪು ಹೆಜ್ಜೆ ನಿಮ್ಮ ಗುರಿಯನ್ನೇ ಬದಲಾಯಿಸಬಹುದು. ಹೆಚ್ಚುವರಿ ಜಾಗರೂಕತೆ ಅತ್ಯವಶ್ಯಕ.
ಚಾರಣದಿಂದ ಉತ್ತಮ ಏಕಾಗ್ರತೆ ಜೊತೆಗೆ ದೇಹಕ್ಕೆ ಚೈತನ್ಯ ದೊರೆಯುತ್ತದೆ. ಶುದ್ಧಗಾಳಿ ಸೇವೆ, ನಡಿಗೆ, ಬೆಟ್ಟ ಹತ್ತಿ-ಇಳಿಯುವಿಕೆ ಹೀಗೆ ಹತ್ತಾರು ಬಗೆಯ ಲಾಭಗಳು ದೇಹಕ್ಕೆ ಉಂಟಾಗಿ ಅದರಿಂದ ಸ್ವಸ್ಥ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಚಾರಣದಿಂದ ಸುತ್ತಲಿನ ಜಗತ್ತಿನ ಬಗ್ಗೆ ತಿಳಿವಳಿಕೆ ದೊರೆಯುತ್ತದೆ. ಹೊಸ ಹೊಸ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಆರೋಗ್ಯಕರ ಚಟುವಟಿಕೆ, ಹೆಚ್ಚಿನ ಶ್ರಮದ ಕ್ರೀಡೆಯಾದ ಪರ್ವತಾರೋಹಣಕ್ಕೂ ಸಹಕಾರಿ. ಖ್ಯಾತ ಪರ್ವತಾರೋಹಿಗಳು ಚಾರಣದಿಂದಲೇ ಈ ಹವ್ಯಾಸವನ್ನು ಆರಂಭಿಸಿರುವುದು ಅದಕ್ಕೂಂದು ಉದಾಹರಣೆ.
ಕೊಡಗು, ಕುದುರೆಮುಖ, ಕೊಡಚಾದ್ರಿ, ಕುಮಾರಪರ್ವತ ಸಹಿತ ಕರ್ನಾಟಕದ ಹಲವು ಪ್ರದೇಶಗಳು ಚಾರಣಿಗರ ನೆಚ್ಚಿನ ತಾಣಗಳು. ಬೆಟ್ಟ- ಗುಡ್ಡದ ಜತೆಗೆ ಜಲಪಾತಗಳ ಚಾರಣ ಮಾಡಲು ಅವಕಾಶ ಇದೆ. ಕೊಡಗಿನ ಹಲವು ಜಲಪಾತಗಳು, ಮುಳ್ಳಯ್ಯನ ಗಿರಿ, ಕಲ್ಲತ್ತಗಿರಿ, ಗಾಳಿಕೆರೆ, ಬ್ರಹ್ಮಗಿರಿ, ಅಬ್ಬೆ ಜಲಪಾತ, ಗೋವರ್ಧನಗಿರಿ ಸೇರಿ ಅನೇಕ ಹೆಸರಿರದ ನೂರಾರು ಸ್ಥಳಗಳು ಕೂಡ ಇವೆ.
| ಕಿರಣ್ ಪೈ