ಬಾಣಂತಿಯರ ಸಾವಿನ ಹೊಣೆ ಯಾರದು? ಮಾಫಿಯಾಗೆ ಕಡಿವಾಣ ಹಾಕಿ

bellary District Hospital
Published on

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೇವಲ 15 ದಿನಗಳೊಳಗೆ ಐವರು ಬಾಣಂತಿಯರು ಮೃತಪಟ್ಟಿರುವುದು ವರದಿಯಾಗಿದೆ. ಹೆರಿಗೆಗೆ ಬಂದಿದ್ದ ಮಹಿಳೆಯರ ಪೈಕಿ ಹಲವರಿಗೆ ಪ್ರಸವದ ನಂತರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಬಹು ಅಂಗಾಂಗ ವೈಫಲ್ಯ, ಮೂತ್ರಪಿಂಡಗಳಲ್ಲಿ ತೀವ್ರತರ ಗಾಯ ಮುಂತಾದ ಗಂಭೀರ ಸಮಸ್ಯೆಗಳು ತಲೆದೋರಿದ್ದವು. ಆಸ್ಪತ್ರೆಯ ಸಿಬ್ಬಂದಿಯೇ ಈ ವಿಷಯವನ್ನು ಹಿರಿಯ ಅಧಿಕಾರಿಗಳಿಗೆ, ಆ ಮೂಲಕ ಸರ್ಕಾರದ ಗಮನಕ್ಕೆ ತಂದಿದ್ದರು. ಪರಿಣಿತ ವೈದ್ಯರ ನೇತೃತ್ವದಲ್ಲಿ ಕೂಡಲೇ ತನಿಖಾ ತಂಡವನ್ನು ರಚಿಸಲಾಗಿತ್ತು. ಆ ತಂಡವು ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಕೂಲಂಕಷ ವಿಚಾರಣೆ ಬಳಿಕ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಬಾಣಂತಿಯರ ಸಾವುಗಳಿಗೆ ಕಾರಣ ಏನೆಂಬುದನ್ನು ವಿವರಿಸಿತ್ತು. ಆರಂಭದಲ್ಲಿ ಸರ್ಕಾರ ಇದನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಸಾವುಗಳು ಸಂಭವಿಸಿದ್ದು ಹೇಗೆ ಎಂಬುದರ ವಿವರಗಳನ್ನು ಸ್ಥಳೀಯ ವೈದ್ಯರು ಮಾಧ್ಯಮಗಳಿಗೆ ಬಹಿರಂಗಪಡಿಸಿದ ಬಳಿಕ, ವ್ಯಾಪಕವಾಗಿ ವರದಿಗಳು ಪ್ರಸಾರವಾದವು. ಆಗ ಈ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿತು. ಎಚ್ಚೆತ್ತುಕೊಂಡ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ ಕೊನೆಗೂ ಕ್ರಮ ಕೈಗೊಳ್ಳಲು ಮುಂದಾಗಿದೆ. ಡ್ರಗ್ಸ್ ಕಂಟ್ರೋಲರ್ ಅಮಾನತಿಗೆ ಆದೇಶಿಸಿದೆಯಲ್ಲದೆ, ಮೇಲ್ನೋಟಕ್ಕೆ ತಪ್ಪಿತಸ್ಥ ಎಂದು ಕಂಡುಬಂದಿರುವ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಸೂಚಿಸಿದೆ.

ಪಶ್ಚಿಮ ಬಂಗಾಳ ಮೂಲದ ‘ಪಶ್ಚಿಮ್ ಬಂಗಾ ಫಾರ್ವಸ್ಯೂಟಿಕಲ್ಸ್ ಲಿಮಿಟೆಡ್’ ಎಂಬ ಕಂಪನಿಯು ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ರಿಂಗರ್ ಲ್ಯಾಕ್ಟೇಟ್ ಎಂಬ ಐವಿ ದ್ರಾವಣವನ್ನು ಪೂರೈಸಿದೆ. ಇದನ್ನು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರಿಗೆ ನೀಡಲಾಗಿತ್ತು. ಸಾವಿಗೆ ಆ ದ್ರಾವಣವೇ ಕಾರಣ ಎಂಬುದು ವೈದ್ಯರ ಅಭಿಮತ. ಈ ದ್ರಾವಣವನ್ನು ರಾಜ್ಯದ ಇತರ ಜಿಲ್ಲಾ ಆಸ್ಪತ್ರೆಗಳಿಗೂ ಕಂಪನಿ ಪೂರೈಸಿದೆ. ದಾವಣಗೆರೆ, ರಾಯಚೂರು, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿಯೂ ಇತ್ತೀಚೆಗೆ ಬಾಣಂತಿಯರ ಸಾವಿನ ಪ್ರಕರಣಗಳು ಸಂಭವಿಸಿವೆ. ಈ ವಿಷಯವನ್ನು ಕೆಲವು ವೈದ್ಯರು ತಮ್ಮ ವೈಯಕ್ತಿಕ ವಾಟ್ಸ್​ಆಪ್ ಗ್ರೂಪ್​ಗಳಲ್ಲಿ ಬಹಿರಂಗಪಡಿಸಿರುವುದೂ ವರದಿಯಾಗಿದೆ. ಆ ಬಗ್ಗೆಯೂ ಸರ್ಕಾರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕಿದೆ.

ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮೇರೆ ಮೀರಿದೆ. ಹಣದ ಆಸೆಯಿಂದ ಕಳಪೆ ಗುಣಮಟ್ಟದ ಔಷಧಗಳ ಖರೀದಿಗೆ ಒಪ್ಪಿಗೆ ನೀಡುವುದು ಸಾಮಾನ್ಯವಾಗಿದೆ. ಇನ್ನೂ ಅನೇಕ ಔಷಧಗಳು ಹೊರರಾಜ್ಯಗಳಿಂದ ಪೂರೈಕೆಯಾಗುತ್ತಿದ್ದು, ಅವೆಲ್ಲವುಗಳ ಸಮಗ್ರ ಪರಿಶೀಲನೆ ಮಾಡಬೇಕಿದೆ. ಕಳಪೆ ಔಷಧಗಳನ್ನು ಕೂಡಲೇ ಆಸ್ಪತ್ರೆಗಳಿಂದ ಹಿಂತೆಗೆದುಕೊಂಡು ತಪ್ಪಿತಸ್ಥ ಅಧಿಕಾರಿಗಳು ಮತ್ತು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಅಧಿಕಾರಿಗಳ ಸ್ವಜನಪಕ್ಷಪಾತ, ಭ್ರಷ್ಟಾಚಾರ, ನಿರ್ಲಕ್ಷ್ಯ ಧೋರಣೆಗಳು ಇನ್ನಷ್ಟು ಜನರ ಪ್ರಾಣ ಕಸಿಯುವ ಮುನ್ನವೇ ರಾಜ್ಯದ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net