

ನವದೆಹಲಿ: ಭಾರತದ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಜಾಧವ್ರನ್ನು ಇರಾಕ್ನಿಂದ ಅಪಹರಿಸಲು ಪಾಕಿಸ್ತಾನದ (Pak) ಗುಪ್ತಚರ ಸಂಸ್ಥೆ ಐಎಸ್ಐಗೆ ಸಹಾಯ ಮಾಡಿದ್ದ ಮುಫ್ತಿ ಷಾ ಮಿರ್ನನ್ನು ಅಪರಿಚಿತರ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಮಾನವ ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಾಣೆಯ ಆರೋಪ ಹೊತ್ತಿರುವ ಮಿರ್ನನ್ನು ಬಲೂಚಿಸ್ತಾನ ಪ್ರಾಂತ್ಯದ ಮಸೀದಿ ಒಂದರ ಹೊರಭಾಗದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಿರ್ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಅಲ್ಲಿನ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿದೆ.
ವಿದ್ವಾಂಸನ ಸೋಗಿನಲ್ಲಿದ್ದ ಮುಫ್ತಿ ಶಾ ಮಿರ್ ಮಾನವ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಜತೆಗೆ ಇಸ್ಲಾಮಿಕ್ ಮೂಲಭೂತವಾದಿ ರಾಜಕೀಯ ಪಕ್ಷವಾದ ಜಮಿಯತ್ ಉಲೇಮಾ-ಇ-ಇಸ್ಲಾಂನ ಸದಸ್ಯನಾಗಿದ್ದ. 2024ರಲ್ಲಿ ಮಿರ್ ಮೇಲೆ ಎರಡು ಬಾರಿ ಹತ್ಯೆ ದಾಳಿ ನಡೆದಿತ್ತು. ಆಗ ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದ.
ಮುಫ್ತಿಯಲ್ಲಿ ಕೃತ್ಯ ಎಸಗುತ್ತಿದ್ದ ಈತ ಪಾಕ್ನ (Pak) ಗುಪ್ತಚರ ಸಂಸ್ಥೆ ಐಎಸ್‌ಐ ನೇತೃತ್ವದ ಡೆತ್ ಸ್ಕ್ವಾಡ್‌ಗಳೊಂದಿಗೆ ಸಂಪರ್ಕ ಹೊಂದಿದ್ದ. ಬಲೂಚಿಸ್ತಾನದ ಹಲವಾರು ಯುವಕರ ಅಪಹರಣ ಮತ್ತು ವಿವಿಧ ಕಾನೂನುಬಾಹಿರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಬಲೂಚಿಸ್ತಾನದಲ್ಲಿ ಧಾರ್ಮಿಕ ಉಗ್ರವಾದವನ್ನು ಹರಡುವಲ್ಲಿಯೂ ಸಹ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಜಮಿಯತ್ ಉಲೇಮಾ-ಇ-ಇಸ್ಲಾಂ ಸಂಘಟನೆಯ ಇಬ್ಬರು ನಾಯಕರನ್ನು ಹತ್ಯೆ ಮಾಡಿದ ಕೆಲ ದಿನಗಳ ಬಳಿಕ ಮುಫ್ತಿ ಷಾ ಮಿರ್ ಹತ್ಯೆಯಾಗಿದೆ.
ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ಕುಲಭೂಷಣ್ ಜಾಧವ್ ಅವರು ಅಕಾಲಿಕ ನಿವೃತ್ತಿ ಪಡೆದ ನಂತರ ಇರಾನ್ನ ಚಬಹಾರ್ನಲ್ಲಿ ವ್ಯಾಪಾರ ನಡೆಸುತ್ತಿದ್ದರು. 2016ರ ಮಾರ್ಚ್ ತಿಂಗಳಲ್ಲಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನ ಹಾಗೂ ಇರಾನ್ ಗಡಿ ಭಾಗದಲ್ಲಿ ಅಪಹರಿಸಿ ಪಾಕಿಸ್ತಾನ ಸೇನೆಗೆ ಮುಫ್ತಿ ಷಾ ಮಿರ್ ಸೇರಿದಂತೆ ಲೆಲವು ಮಧ್ಯವರ್ತಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಗಿತ್ತು.
2017ರ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಜಾಧವ್ ಅವರಿಗೆ ಗೂಢಚರ್ಯೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಮರಣದಂಡನೆ ವಿಧಿಸಿತು. ಪಾಕಿಸ್ತಾನದ ಮಿಲಿಟರಿ ತೀರ್ಪನ್ನು ಖಂಡಿಸಿ ಭಾರತ ಸರ್ಕಾರವು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಅದರಂತೆ ಅಂತಾರಾಷ್ಟ್ರೀಯ ನ್ಯಾಯಾಲಯವು ಮರಣದಂಡನೆಗೆ ತಡೆ ನೀಡಿತ್ತು. ದೋಷಾರೋಪಣೆ ಪ್ರಕ್ರಿಯೆಯನ್ನು ಪರಿಶೀಲಿಸುವಂತೆ ಮತ್ತು ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ನೀಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿದೆ.