ತಂಡಗಳು ಕೌಶಲ್ಯದಿಂದ ಗೆದ್ದರೆ, ಕೆಲವರು ವೇಳಾಪಟ್ಟಿಯಿಂದ; Champions Trophy ಫೈನಲ್​ಗೂ ಮುನ್ನ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ ಪಾಕ್

Champions Trophy
Published on

ನವದೆಹಲಿ: ಮಿನಿ ವಿಶ್ವಕಪ್​ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್ ಟ್ರೋಫಿಯು (Champions Trophy) ಇಂದು (ಮಾರ್ಚ್ 09) ಮುಕ್ತಾಯವಾಗಲಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಟೂರ್ನಿ ಆರಂಭವಾಗುವುದಕ್ಕೂ ಮುಂಚಿನಿಂದಲೂ ಭಾರತ ಹಾಗೂ ಪಾಕ್ ನಡುವಿನ ಕಿತ್ತಾಟದಿಂದ ಸಾಕಷ್ಟು ಹೈಪ್ ಪಡೆದುಕೊಂಡಿತ್ತು. ಭದ್ರತೆಯ ಕಾರಣ ನೀಡಿ ಭಾರತ ಪಾಕ್​ ನೆಲದಲ್ಲಿ ಆಡುವುದಿಲ್ಲ ಎಂದು ಹೇಳಿ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ (ಹೈಬ್ರಿಡ್ ಮಾದರಿ) ಆಡುತ್ತಿದ್ದು, ಪಿಚ್​ನ ಲಾಭದ ಬಳಿಕ ಇದೀಗ ಭಾರತದ ವಿರುದ್ಧ ಹೊಸ ಆರೋಪ ಕೇಳಿ ಬಂದಿದೆ.

29 ವರ್ಷಗಳ ಬಳಿಕ ಐಸಿಸಿ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸಿರುವ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವು ಒಂದು ಗೆಲುವು ಕಾಣದೇ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಟೂರ್ನಿಯಿಂದ ಹೀನಾಯವಾಗಿ ಹೊರಬಿದ್ದ ಬೆನ್ನಲ್ಲೇ ಭಾರತದ ವಿರುದ್ಧ ಪಿಚ್ ಲಾಭ ಸೇರಿದಂತೆ ಗಂಭೀರ ಆರೋಪ ಮಾಡಿದ್ದ ಪಾಕಿಸ್ತಾನದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಇದೀಗ ಟೀಮ್ ಇಂಡಿಯಾ ವಿರುದ್ಧ ಪ್ರಯಾಣದ ವಿಚಾರವಾಗಿ ಆರೋಪ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜುನೈದ್ ಖಾನ್​, ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ನ್ಯೂಜಿಲೆಂಡ್ ತಂಡವು 7,150, ದಕ್ಷಿಣ ಆಫ್ರಿಕಾ 3,286, ಭಾರತ 0 ಕಿಲೋಮೀಟರ್ ಪ್ರಯಾಣಿಸಿದೆ. ಕೆಲವು ತಂಡಗಳು ಕೌಶಲ್ಯದಿಂದ ಗೆಲ್ಲುತ್ತವೆ, ಕೆಲವು ತಂಡಗಳು ವೇಳಾಪಟ್ಟಿಯಿಂದ ಗೆಲ್ಲುತ್ತವೆ ಎಂದು ಟ್ವೀಟ್ ಮಾಡುವ ಮೂಲಕ ಭಾರತದ ವಿರುದ್ಧ ಹೊಸ ಆರೋಪವೊಂದನ್ನು ಮಾಡಿದ್ದಾರೆ. ಇದೀಗ ಈ ಟ್ವೀಟ್ ವೈರಲ್ ಆಗಿದ್ದು, ಪಾಕಿಸ್ತಾನದ ವಿರುದ್ಧ ಕ್ರೀಡಾಭಿಮಾನಿಗಳು ಮುಗಿಬಿದ್ದಿದ್ದಾರೆ. 

ಸೆಮಿಫೈನಲ್​ಗೂ ಮೊದಲು ಗೌತಮ್ ಗಂಭೀರ್​ಗೆ ಪಿಚ್​ನ ಲಾಭ ಪಡೆಯುತ್ತಿರುವುದರ ಕುರಿತು ಸುದ್ದಿಗೋಷ್ಠಿಯಲ್ಲಿ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಗಂಭೀರ್, ನಾವು ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ನಾವು ಕ್ರೀಡಾಂಗಣದಲ್ಲಿ ಪಡೆಯುವ ಪರಿಸ್ಥಿತಿಗಳಿಗಿಂತ ಭಿನ್ನವಾಗಿರುತ್ತದೆ. ಕೆಲವು ಜನರು ಶಾಶ್ವತವಾಗಿ ಕ್ರಿಬ್ಬರ್‌ಗಳಾಗಿರುತ್ತಾರೆ ಅವರು ಬೆಳೆಯಬೇಕಾಗಿದೆ ಎಂದು ಖಡಕ್ ತಿರುಗೇಟು ನೀಡಿದ್ದರು. ಇದೀಗ ಪಾಕ್​ ಮಾಜಿ ವೇಗಿಯ ಈ ಟ್ವೀಟ್ ವೈರಲ್ ಆಗಿದ್ದು, ಬಿಸಿಸಿಐ ಮತ್ತು ಐಸಿಸಿ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net