ಈಶ್ವರಪ್ಪ- ಇಬ್ರಾಹಿಂ ಇಬ್ಬರಲ್ಲಿ ಯಾರು ಹೆಚ್ಚು ಬೆಳ್ಳಗಿದ್ದಾರೆ?

Eshwarappa - Ibrahim
Published on

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ‌ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಇಬ್ಬರಲ್ಲಿ ಯಾರು ಹೆಚ್ಚು ಬೆಳ್ಳಗಿರೋರು? ಇಂತಹದೊಂದು ಸ್ವಾರಸ್ಯಕರ ಪ್ರಶ್ನೆ ಮೇಲ್ಮನೆಯಲ್ಲಿ ನಗುವಿನ ಮಧ್ಯೆ ತೇಲಿಬಂತು.

ಗಮನಸೆಳೆಯುವ ಸೂಚನೆಯಡಿ ಜೆಡಿಎಸ್​ನ ಕೆ.ಎ.ತಿಪ್ಪೇಸ್ವಾಮಿ ಪ್ರಸ್ತಾಪಿಸಿದ್ದ ಅಂಗನವಾಡಿ ಹಾಗೂ ಶಾಲೆಗಳಿಗೆ ಕುಡಿವ ನೀರು, ಶೌಚಗೃಹ‌ ವ್ಯವಸ್ಥೆ ಕುರಿತು ಕೆ.ಎಸ್.ಈಶ್ವರಪ್ಪ ನೀಡಿದ್ದ ಲಿಖಿತ ಉತ್ತರದ ಜತೆಗೆ ಸುತ್ತೋಲೆ ಹಾಗೂ ಆದೇಶದ ಪ್ರತಿ ಲಗತ್ತಿಸಲಾಗಿತ್ತು. ಈ ಪೈಕಿ 3 ಪುಟಗಳು ಪೂರ್ಣ ಕಪ್ಪಾಗಿದ್ದನ್ನು ಬಿಜೆಪಿಯ ಆಯನೂರು ಮಂಜುನಾಥ್ ಎತ್ತಿ ತೋರಿಸಿ, ಹೇಗೆ ಓದಿಕೊಳ್ಳುವುದು? ಇದನ್ನು ಒದಗಿಸಿದ ಅಧಿಕಾರಿಗಳ ಕಾರ್ಯವೈಖರಿಗೆ ನಗುತ್ತಲೇ ಚಾಟಿ ಬೀಸಿದರು. ಇದನ್ನೂ ಓದಿರಿ ತನಿಖೆ ವೇಳೆ ಬಯಲಾಯ್ತು ಸಿಡಿ ಗ್ಯಾಂಗ್​ನ ತಂತ್ರ! ಇದು ಎಕ್ಸ್​ಕ್ಲೂಸಿವ್​ ಮಾಹಿತಿ

ಮಧ್ಯೆ ಪ್ರವೇಶಿಸಿದ ಸಿ.ಎಂ.ಇಬ್ರಾಹಿಂ, ಅಂಗನವಾಡಿ ಹಾಗೂ ಶಾಲೆಗಳಿಗೆ ಸರ್ಕಾರ ಪೂರೈಸುವ ನೀರು ಹೇಗಿರುತ್ತದೆ ಎಂದು ಸಾಂಕೇತಿಕವಾಗಿ ತೋರಿಸಿದ್ದೀರಿ ಬಿಡಿ ಎಂದು ನಗುತ್ತಾ ಕಾಲೆಳೆದರೆ, ಅಯ್ಯೋ ನೀನು ಭಾರಿ ಬೆಳ್ಳಗಿದ್ದಿ ಬಿಡಪ್ಪಾ ಎಂದು ಈಶ್ವರಪ್ಪ ನಗೆ ಚಟಾಕಿ ಹಾರಿಸಿದರು.

ಮತ್ತೆ ಮಾತು ಮುಂದುವರಿಸಿದ ಇಬ್ರಾಹಿಂ ನಾನು ಮತ್ತು ನೀವು (ಈಶ್ವರಪ್ಪ) ಒಟ್ಟಿಗೆ ನಿಲ್ಲೋಣ. ಯಾರು ಹೆಚ್ಚು ಬೆಳ್ಳಗೆ ಅಂತ ಗೊತ್ತಾಗುತ್ತೆ ಎಂದು ಗಹಗಹಿಸಿ ನಕ್ಕರು.

ಮಧ್ಯೆಪ್ರವೇಶಿಸಿದ ಬಸವರಾಜ ಹೊರಟ್ಟಿ, ಈ ರೀತಿ ಕಪ್ಪು ಪುಟಗಳನ್ನು ಕೊಟ್ಟರೆ ಏನೆಂದು ತಿಳಿಯುವುದು? ಎಂದಾಗ ಪ್ರತಿಕ್ರಿಯಿಸಿದ ಈಶ್ವರಪ್ಪ, ತಪ್ಪಾಗಿರುವುದು ನಿಜ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ತೇವೆ ಎಂಬ ಭರವಸೆ ನೀಡಿ ಸ್ವಾರಸ್ಯಕರ ಚರ್ಚೆಗೆ ತೆರೆ ಎಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net