

ಬೆಂಗಳೂರು: ಯಾರು ಹಿತವರು ಈ ಮೂವರೊಳಗೆ? ಎಂಬುದು ಲೋಕೋಕ್ತಿ. ಸಂದರ್ಭಾನುಸಾರ ಈ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಆದರೆ ಇದೀಗ ಖ್ಯಾತ ಚಿತ್ರನಿರ್ದೇಶಕರೊಬ್ಬರು ಈ ಮಾತನ್ನು ಹೇಳಿರುವುದು ಗಮನ ಸೆಳೆದಿದೆ. ಅದರಲ್ಲೂ ಅವರು ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿ ಈ ಮಾತು ಹೇಳಿದ್ದರಿಂದ ಇದು ಕುತೂಹಲ ಕೆರಳಿಸಿದೆ.
ಅಂದಹಾಗೆ ಈ ಮಾತನ್ನು ಹೇಳಿರುವುದು ರಾಜ್ಯದಲ್ಲಿನ ಮೂರು ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬಗ್ಗೆ.. ಈ ಮಾತನ್ನು ಹೇಳಿರುವುದು ಬೇರಾರೂ ಅಲ್ಲ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಇಂದು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಬರೆದು ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.
"ಯಾರು ಹಿತವರು ಈ ಮೂವರೊಳಗೆ?
ಬಹುಮತವಿದ್ದೂ ಬಾಳಲು ಬರದ ಕಾಂಗ್ರೆಸ್ಸೋ?
ಸೋತರೂ ಆತ್ಮಾವಲೋಕನ ಮಾಡಿಕೊಳ್ಳದ ಬಿಜೆಪಿಯೋ?
ಅಸ್ತಿತ್ವಕ್ಕಾಗಿ ಆತ್ಮವನ್ನೇ ಮಾರಿಕೊಳ್ಳುತ್ತಿರುವ ಜೆಡಿಎಸ್ಸೋ?
ಯಾರು ಹಿತವರು ಈ ಮೂವರೊಳಗೆ?"
ಎಂದು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಹೀಗೆ ವಿಭಿನ್ನವಾದ ಒಂದು ಪೋಸ್ಟ್ ಮೂಲಕ ಅವರು ರಾಜ್ಯದ ಜನತೆ ಚಿಂತನೆ ನಡೆಸುವಂತೆ ಮಾಡಿದ್ದಾರೆ. ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಇರುವ ಸಂದರ್ಭದಲ್ಲಿ ಅವರು ಹೀಗಂದಿರುವುದು ವಿಶೇಷ ಎನಿಸಿಕೊಂಡಿದೆ.