

ಉತ್ತರಪ್ರದೇಶ: ಬಸ್ ನಿಲ್ದಾಣದ ಬಳಿಯಿದ್ದ ಹ್ಯಾಂಡ್ ಪಂಪ್ನಿಂದ ಬಿಳಿ ನೀರು ಹೊರಬರುತ್ತಿದ್ದನ್ನು ಕಂಡ ಸ್ಥಳೀಯರು ಅದನ್ನು ಕುಡಿದಿದ್ದಲ್ಲದೇ, ಹಾಲು ಎಂದು ಭಾವಿಸಿ, ಬಾಟಲಿ ಹಿಡಿದು ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ನಲ್ಲಿ ವರದಿಯಾಗಿದೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ವೀಡಿಯೊದಲ್ಲಿ ಸ್ಥಳೀಯರು ಕೈ ಪಂಪ್ ಬಳಿ ನಿಂತು, ಅದರಿಂದ ಹೊರಬರುತ್ತಿರುವ ಬಿಳಿ ನೀರನ್ನು ಹಾಲು ಎಂದು ಭಾವಿಸಿ, ಬಾಟಲಿ ಮತ್ತು ಕಂಟೇನರ್ಗಳಲ್ಲಿ ತುಂಬಲು ಪ್ರಯತ್ನಿಸುತ್ತಿರುವುದು ದೃಶ್ಯದಲ್ಲಿ ಕಾಣಬಹುದು.
ಇದು ಹಾಲಲ್ಲ ಎಂದು ಅನೇಕರು ಹೇಳಿದ ಬಳಿಕ ಸುಮ್ಮನಾದ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನೀರಿನ ಪಂಪ್ಗೆ ಹಾನಿಯಾದ ಕಾರಣ ನೀರು ಕಲುಷಿತಗೊಂಡು, ಬಿಳಿ ಬಣ್ಣಕ್ಕೆ ತಿರುಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಈ ಘಟನೆಯ ಬಳಿಕ ಇಲ್ಲಿನ ನೀರಿನ ಸುರಕ್ಷತೆಯ ಬಗ್ಗೆ ಈಗ ಕಳವಳ ಹೆಚ್ಚಾಗಿದ್ದು, ಬಿಲಾರಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ವೈರಲ್ ವೀಡಿಯೊವನ್ನು ಗಮನಿಸಿ, ವಿಷಯದ ಬಗ್ಗೆ ತನಿಖೆ ವಹಿಸಲು ಮುಂದಾಗಿದ್ದಾರೆ.
ಹ್ಯಾಂಡ್ ಪಂಪ್ನಿಂದ ಹೊರಬಂದ ಬಿಳಿ ನೀರಿನ ಬಗ್ಗೆ ನಡೆಸಿದ ತನಿಖೆಯ ನಂತರ, ಇದು ಹಾಲಲ್ಲ, ಬದಲಿಗೆ ಮುರಿದ ಪ್ಲಾಟ್ಫಾರ್ಮ್ನಿಂದ ಪಂಪ್ನ ಕೆಳಗಿನ ಹಂತಕ್ಕೆ ಸೋರಿಕೆಯಾದ ಮಾಲಿನ್ಯಕಾರಕ ಎಂದು ಸ್ಪಷ್ಟಪಡಿಸಿದೆ.
ಮಾಲಿನ್ಯಗೊಂಡ ಕಾರಣ ಅದು ಬಿಳಿ ಬಣ್ಣಕ್ಕೆ ತಿರುಗಿದೆ ಎಂದು ವಿವರಿಸಿದ್ದಾರೆ. ಪರಿಸ್ಥಿತಿಯನ್ನು ಪರಿಹರಿಸಲು ಪಂಪ್ನ ಸಂಪೂರ್ಣ ತಪಾಸಣೆ ನಡೆಸುವಂತೆ ನಗರಸಭೆಗೆ ಸೂಚಿಸಲಾಗಿದ್ದು, ಅಗತ್ಯ ಮರುಮೌಲ್ಯಮಾಪನ ಮಾಡಿದ ಬಳಿಕವೇ ನೀರು ಸರಬರಾಜು ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).