ಭಾರತ ಭವಿಷ್ಯದ ಯುದ್ಧಗಳನ್ನು ಎದುರಿಸಲು ‘ಡ್ಯುಯಲ್-ಯೂಸ್ ಇಂಡಸ್ಟ್ರಿ’ ಅಂದರೆ ನಾಗರಿಕ ಮತ್ತು ಮಿಲಿಟರಿ ಎರಡೂ ಉದ್ದೇಶಗಳಿಗೆ ಬಳಕೆಯಾಗುವ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇಂದು ಭಾರತದಲ್ಲಿ ತಯಾರಾಗುವ ಕಾರ್, ಬೈಕ್ ಮತ್ತು ಡ್ರೋನ್ಗಳನ್ನು ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸುವಂತೆ ನಮ್ಮ ಉತ್ಪಾದನಾ ವ್ಯವಸ್ಥೆ ರೂಪುಗೊಳ್ಳಬೇಕು. ಇನ್ನು ಇಂಧನ ಮೀಸಲು ವಿಷಯಕ್ಕೆ ಬಂದರೆ, ವಿಶಾಖಪಟ್ಟಣ ಮತ್ತು ಮಂಗಳೂರಿನಲ್ಲಿರುವ 5.33 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಸಂಗ್ರ್ರಾಗಾರಗಳು ಪ್ರಸ್ತುತ ಕೇವಲ ಕಚ್ಚಾ ತೈಲ ಮೀಸಲಿಗಾಗಿವೆ. ಗ್ಯಾಸ್ (ಎಲ್ಪಿಜಿ/ಎಲ್ಎನ್ಜಿ) ಸಂಗ್ರ್ರಾಗಾರಗಳ ನಿರ್ವಣದ ವಿಷಯದಲ್ಲಿ ಮತ್ತಷ್ಟು ಗಹನಕಾರ್ಯಗಳು ಜರುಗಬೇಕಿದೆ. ಪ್ರಧಾನಿ ಮೋದಿ ಘೊಷಿಸಿದಂತೆ, 2030ರ ವೇಳೆಗೆ ಭಾರತದ ಇಂಧನ ಬಳಕೆಯಲ್ಲಿ ನೈಸರ್ಗಿಕ ಅನಿಲದ ಪಾಲನ್ನು 6%ನಿಂದ 15%ಗೆ ಹೆಚ್ಚಿಸುವ ಗುರಿಯಿದೆ. ಈ ಗುರಿ ತಲುಪಲು ಕೇವಲ ತೈಲವಲ್ಲದೆ, ಗ್ಯಾಸ್ ಸಂಗ್ರಹಣೆಗೂ ಪ್ರತ್ಯೇಕ ‘ಸ್ಟ್ರಾಟೆಜಿಕ್ ರಿಸರ್ವ್’ ನಿರ್ವಿುಸುವುದು ಅನಿವಾರ್ಯ. ಜತೆಗೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ರಷ್ಯಾದ ಟ್ರಾನ್ಸ್-ಸೈಬೀರಿಯಾ ಪೈಪ್ಲೈನ್ ನಂತಹ ಯೋಜನೆಗಳು ‘ಒನ್ ಟೈಮ್ ಇನ್ವೆಸ್ಟ್ಮೆಂಟ್’ ಆಗಿದ್ದು, ಇವು ಬೃಹತ್ ಹಡಗುಗಳ ಶಿಪ್ಪಿಂಗ್ ವೆಚ್ಚವನ್ನು ಕಡಿತಗೊಳಿಸಿ ಇಂಧನ ಪೂರೈಕೆ ಸರಪಳಿಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತವೆ. ಇಂತಹ ಯೋಜನೆಗಳ ಪಾಲುದಾರನಾಗಲು ಭಾರತ ಈಗ ಪ್ರಯತ್ನಿಸಬೇಕಿದೆ. ಇನ್ನು ‘ಚೋಕ್ ಪಾಯಿಂಟ್’ಗಳಾದ ಹೊಮುಜ್ ಜಲಸಂಧಿ ರೀತಿಯ ಇಂಧನ ಪೂರೈಕೆ ವ್ಯವಸ್ಥೆ ಮೇಲೆ ಅವಲಂಬಿತವಾಗುವ ಬದಲು, ಭಾರತ ತನ್ನ ಆಮದು ಮತ್ತು ರಫ್ತಿನ ಮೂಲಗಳನ್ನು ಮೇಲೆ ತಿಳಿಸಿದಂತೆ ವೈವಿಧ್ಯಮಯಗೊಳಿಸಬೇಕಿದೆ.