

ನವದೆಹಲಿ: ನಾವು ಮಲಗಿದಾಗ ಕರೊನಾ ವೈರಸ್ ಕೂಡ ಮಲಗುತ್ತದೆ. ಆದ್ದರಿಂದ ಕರೊನಾ ಸೋಂಕಿನಿಂದ ದೂರವಾಗಬೇಕಾದರೆ ಏನೊಂದು ಕೆಲಸ ಮಾಡದೆ ಹೆಚ್ಚುಹೊತ್ತು ಮಲಗಬೇಕು ಎಂದು ಪಾಕಿಸ್ತಾನದ ಧರ್ಮಬೋಧಕರೊಬ್ಬರು ಹೇಳಿದ್ದಾರೆ. ಇವರ ಈ ಹೊಸ ವಿ...ಜ್ಞಾನ ಅಂತಾರ್ಜಾಲ ಲೋಕವನ್ನೇ ಅಲ್ಲೋಲಕಲ್ಲೋಲ ಮಾಡಿದೆ!
ನಮಗೆ ಹುಷಾರಿಲ್ಲ ಎಂದಾದರೆ ವೈದ್ಯರು ನಮಗೆ ವಿಶ್ರಾಂತಿ ಪಡೆದುಕೊಳ್ಳುವಂತೆ ಸಲಹೆ ನೀಡುತ್ತಾರೆ. ನಾವು ಹೆಚ್ಚು ಹೊತ್ತು ನಿದ್ದೆ ಮಾಡಿದರೆ, ಆದಷ್ಟು ಬೇಗ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಕೂಡ ಹಾಗೆಯೇ. ನಾವು ಎಷ್ಟು ಹೊತ್ತು ಮಲಗುತ್ತೇವೋ, ಕರೊನಾ ವೈರಾಣು ಕೂಡ ಅಷ್ಟು ಹೊತ್ತು ಮಲಗುತ್ತದೆ. ಅದು ನಮಗೆ ಏನೊಂದು ಹಾನಿ ಮಾಡುವುದಿಲ್ಲ. ನಾವು ಸತ್ತಾಗ ಅದು ಕೂಡ ಸಾಯುತ್ತದೆ ಎಂದು ಆ ಧರ್ಮಬೋಧಕರು ಹೇಳಿದ್ದಾರೆ.
ಪತ್ರಕರ್ತೆ ನೈಲಾ ಇನಾಯತ್ ಧರ್ಮಬೋಧಕರ ಬೋಧನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಹರಿಬಿಟ್ಟಿದ್ದು, ಭಾರಿ ಸಂಚಲನ ಮೂಡಿಸುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವೀಟಿಗರೊಬ್ಬರು ನಮಗೆ ಈ ವಿಜ್ಞಾನ ಮೊದಲೇ ಏಕೆ ತಿಳಿಯಲಿಲ್ಲವಲ್ಲಾ ಎಂದು ಪೇಚಾಡಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಶನಿವಾರದವರೆಗೆ ಅಲ್ಲಿ 1,35,702 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಸಿಂಧ್ ಪ್ರಾಂತ್ಯದಲ್ಲಿ 51,518 ಸೋಂಕಿತರು ಇದ್ದರೆ, ಪಂಜಾಬ್ ಪ್ರಾಂತ್ಯದಲ್ಲಿ 50,087, ಖೈಬರ್ ಪಖ್ತೂನ್ವಾದಲ್ಲಿ 17,450, ಬಲೂಚಿಸ್ತಾನದಲ್ಲಿ 7,866, ಇಸ್ಲಾಮಾಬಾದ್ನಲ್ಲಿ 7,163, ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ 1,044 ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 574 ಸೋಂಕಿತರು ಇರುವುದಾಗಿ ಹೇಳಲಾಗುತ್ತಿದೆ.