ಕರೊನಾದ ಆರಂಭಿಕ ಚಿಕಿತ್ಸೆಗೆ ರೆಂಡೆಸಿವಿರ್​ ಚುಚ್ಚುಮದ್ದು ಬಳಕೆಗೆ ಸರ್ಕಾರದ ಹಸಿರುನಿಶಾನೆ

remdesivir
Published on

ನವದೆಹಲಿ: ಕರೊನಾ ಸೋಂಕಿನ ಆರಂಭಿಕ ಚಿಕಿತ್ಸೆಯಲ್ಲಿ ವೈರಾಣುನಿರೋಧಕ ಚುಚ್ಚುಮದ್ದು ರೆಂಡೆಸಿವಿರ್​ ಬಳಕೆಗೆ ಕೇಂದ್ರ ಸರ್ಕಾರ ಶನಿವಾರ ಹಸಿರು ನಿಶಾನೆ ತೋರಿದೆ. ಇದರ ಜತೆಗೆ ಎಚ್​ಸಿಕ್ಯು ಮಾತ್ರೆಗಳನ್ನು ಕೂಡ ರೋಗಿಗಳಿಗೆ ಕೊಡುವಂತೆ ಸಲಹೆ ನೀಡಿದೆ.

ಈ ಔಷಧಗಳ ಜತೆಗೆ ಕನ್​ವಲಸೆಂಟ್​ ಪ್ಲಾಮಾ ಚಿಕಿತ್ಸೆಯನ್ನು ಕೂಡ ಕೊಡಲು ಸಮ್ಮತಿಸಿದೆ. ಸಂಪೂರ್ಣವಾಗಿ ಗುಣಮುಖರಾದ ಕೋವಿಡ್​-19 ರೋಗಿಗಳಿಂದ ಪಡೆದುಕೊಂಡ ಪ್ಲಾಸ್ಮಾವನ್ನು, ಸ್ಟಿರಾಯ್ಡ್​ಗಳನ್ನು ಕೊಟ್ಟರೂ ಚೇತರಿಸಿಕೊಳ್ಳದ ಆರಂಭಿಕ ಹಂತದ ಸೋಂಕಿತರಿಗೆ ವರ್ಗಾವಣೆ ಮಾಡಿ ಚಿಕಿತ್ಸೆ ನೀಡಲು ಮಾತ್ರ ಈ ಆದೇಶ ಸೀಮಿತವಾಗಿದೆ ಎಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಈ ಹಿಂದಿನ ಮಾರ್ಗಸೂಚಿಯ ಪ್ರಕಾರ ತೀವ್ರವಾದ ಸೋಂಕಿನಿಂದ ಬಳಲುತ್ತಿರುವವರ ಚಿಕಿತ್ಸೆಗೆ ಎಚ್​ಸಿಕ್ಯೂ ಮಾತ್ರೆಗಳನ್ನು ಕೊಡಬಹುದು ಎಂದು ಹೇಳಲಾಗಿತ್ತು.

ಆದರೆ ಈಗ ಆ್ಯಂಟಿಬಯಾಟಿಕ್​, ಅಜಿತ್ರೋಮೈಸಿನ್​ ಜತೆಗೆ ಎಚ್​ಸಿಕ್ಯೂ ಮಾತ್ರೆಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಇದರ ಜತೆಗೆ ರೋಗಿಗಳ ಹಿತದೃಷ್ಟಿಯಿಂದ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಪ್ರತಿಪಾದಿಸಲಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈ ಮಾತ್ರೆಯನ್ನು ಆರಂಭಿಕ ಹಂತದ ಚಿಕಿತ್ಸೆಯಲ್ಲಿ ಮಾತ್ರ ಬಳಸಬೇಕು. ಇದನ್ನು ಕೊಡುವ ಮುನ್ನ ರೋಗಿಗೆ ಕಡ್ಡಾಯವಾಗಿ ಇಸಿಜಿ ಮಾಡಿರಬೇಕು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net