

ರಾಯ್ಪುರ: ಪ್ರೀತಿಸಿದವರು ಕೈ ಕೊಟ್ಟರೆ ಜೀವನವೇ ಮುಗಿಯಿತು ಎಂದುಕೊಳ್ಳುವ ಯುವಜನತೆ, ಅದೇ ಪ್ರೀತಿಯ ನೆನಪಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಾತ್ರ ಪ್ರೀತಿಸಿದವಳು ಕೈ ಕೊಟ್ಟಿದ್ದಕ್ಕೆ ದೊಡ್ಡ ದರೋಡೆಕೋರನಾಗಿ ಬದಲಾಗಿದ್ದಾನೆ. ಮಹಿಳೆಯರು, ಯುವತಿಯರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಛತ್ತೀಸಗಢದ ರಾಯ್ಪರದಲ್ಲಿ ಇಂತಹ ವಿಚಿತ್ರ ವ್ಯಕ್ತಿಯೊಬ್ಬ ಜೀವಿಸುತ್ತಿದ್ದಾನೆ. ಈ ವಿಚಿತ್ರ ವ್ಯಕ್ತಿಯ ಹೆಸರು ಅಭಿಷೇಕ್ ಜೋಶಿ. ಈತ ಬಿಸಿಎ ಪದವಿ ವಿದ್ಯಾಭ್ಯಾಸ ಮಾಡುವಾಗ ಸಹಪಾಠಿ ಒಬ್ಬಳನ್ನು ಪ್ರೀತಿಸುತ್ತಿದ್ದನಂತೆ. ತಂದೆ ಶ್ರೀಮಂತನಾಗಿದ್ದರಿಂದ ಆಕೆಯೂ ಪ್ರೀತಿಯ ನಾಟಕವಾಡಿದ್ದಳು. ಆದರೆ ಅಭಿಷೇಕ್ನ ತಂದೆ ತಾಯಿ ಅಕಾಲಿಕ ಮರಣ ಹೊಂದಿದ ನಂತರ ಅವಳು ಇವನ ಪ್ರೀತಿಗೆ ಒಲ್ಲೆ ಎಂದು ಬೇರೊಬ್ಬನನ್ನು ಮದುವೆಯಾಗಿದ್ದಳು. ಅದೇ ನೋವಿನಲ್ಲಿದ್ದ ಅಭಿಷೇಕ್ ತನ್ನ 18 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಯನ್ನು ಕೇವಲ 14 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಮಹಿಳೆಯರು ಮತ್ತು ಯುವತಿಯರ ಮೇಲೆ ದ್ವೇಷ ಬೆಳೆಸಿಕೊಂಡು ಅವರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಲಾರಂಭಿಸಿದ್ದಾನೆ.
ಕಳೆದ ಎಂಟು ವರ್ಷದಿಂದ ಅಭಿಷೇಕ್ ಕಳ್ಳತನ ಮಾಡುತ್ತಿದ್ದಾನೆ. ಒಂದೇ ವರ್ಷದಲ್ಲಿ 50ಕ್ಕೂ ಹೆಚ್ಚು ಕಳ್ಳತನ ಮಾಡಿದ್ದಾನೆ. ಇತ್ತೀಚೆಗೆ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ಸರವನ್ನು ಕದ್ದಿದ್ದ. ಅದಾದ ನಂತರ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದ ಪೊಲೀಸರು ಇವನ ಕಾರಿನ ಬೆನ್ನು ಬಿದ್ದಿದ್ದರು. ನೆಲೆಯಿಲ್ಲದ ಅಭಿಷೇಕ್ ಹೋಟೆಲ್ ಒಂದರಲ್ಲಿ ರೂಂ ಮಾಡಿಕೊಂಡು ತಂಗಿದ್ದಾಗ, ಪೊಲೀಸರು ಹೋಟೆಲ್ಗೆ ತೆರಳಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯ ವೇಳೆ ಅಭಿಷೇಕ್ ನಡೆದ ಘಟನೆಯನ್ನೆಲ್ಲ ವಿವರಿಸಿದ್ದಾನೆ. (ಏಜೆನ್ಸೀಸ್)