ಭಾರತ ಸುಧಾರಣೆ ಆಗುತ್ತಿದ್ದರೆ ಜಗತ್ತೇ ಪರಿವರ್ತನೆ ಆಗುತ್ತಿರುತ್ತದೆ: ಪ್ರಧಾನಿ ನರೇಂದ್ರ ಮೋದಿ

1170459
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಯುನೈಟೆಡ್​ ನೇಷನ್ಸ್​ ಜನರಲ್ ಅಸೆಂಬ್ಲಿ (ಯುಎನ್​ಜಿಎ) 76ನೇ ಅಧಿವೇಶನವನ್ನು ಉದ್ದೇಶಿಸಿ ಆಡಿದ ಮಾತು ಇದೀಗ ಭಾರಿ ಗಮನ ಸೆಳೆಯುತ್ತಿದ್ದು, ಭಾರತ ವಿಶ್ವಗುರು ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ.

ಭಾರತ ಪ್ರಜಾಪ್ರಭುತ್ವದ ತಾಯಿ ಎನ್ನುವ ಮೂಲಕ ಇಲ್ಲಿನ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಣ್ಣಿಸಿರುವ ಪ್ರಧಾನಿ ಮೋದಿ, ಭಾರತ ಸುಧಾರಣೆ ಆಗುತ್ತಿದ್ದರೆ, ಜಗತ್ತೇ ಪರಿವರ್ತನೆ ಆಗುತ್ತಿರುತ್ತದೆ ಎಂಬ ವಿಶ್ವಾಸದ ನುಡಿಗಳನ್ನೂ ಹೊರಹೊಮ್ಮಿಸಿದ್ದಾರೆ.

ಜೋ ಬೈಡೆನ್ ಜೊತೆ ವಾಷಿಂಗ್ಟನ್​ನಲ್ಲಿ ದ್ವಿಪಕ್ಷೀಯ ಸಭೆಯನ್ನು ನಡೆಸಿ ನ್ಯೂಯಾರ್ಕ್​​ಗೆ ಬಂದಿಳಿದ ಮೋದಿ, ಭಾರತದ ಪ್ರಜಾಪ್ರಭುತ್ವ ಯಾಕೆ ವಿಶೇಷ ಎಂಬುದನ್ನೂ ವಿವರಿಸಿದರು. ಹಲವು ಭಾಷೆ, ಬಹಳ ಆಡುಭಾಷೆ, ವಿವಿಧ ಜೀವನಶೈಲಿ ಜೊತೆಗೆ ಆಹಾರ ಪದ್ಧತಿಯನ್ನೂ ಹೊಂದಿರುವುದೇ ಒಂದು ಸ್ಪಂದನಾಶೀಲ ಪ್ರಜಾಪ್ರಭುತ್ವದ ಪ್ರತೀಕ ಎಂದರು.

ಜಗತ್ತಿನ ಪ್ರತಿ 6 ಜನರಿಗೆ ಒಬ್ಬರಂತೆ ಭಾರತೀಯರಿದ್ದಾರೆ. ಹೀಗಾಗಿ ಭಾರತೀಯರ ಬೆಳವಣಿಗೆ ಜಾಗತಿಕ ಬೆಳವಣಿಗೆಗೂ ಕಾರಣವಾಗುತ್ತದೆ. ಭಾರತ ಬೆಳೆದಾಗ ವಿಶ್ವವೂ ಬೆಳೆಯುತ್ತದೆ, ಭಾರತ ಸುಧಾರಣೆಯಾದಾಗ ಪ್ರಪಂಚವೂ ಪರಿವರ್ತನೆ ಆಗುತ್ತದೆ ಎಂಬುದಾಗಿ ಮೋದಿ ಹೇಳಿದರು.

ಜಗತ್ತಿನ ಮೊದಲ ಡಿಎನ್​ಎ ವ್ಯಾಕ್ಸಿನ್​ ಕೂಡ ಭಾರತದಿಂದಲೇ ಅಭಿವೃದ್ಧಿ ಪಡಿಸಲಾಗಿದೆ ಎಂಬುದನ್ನೂ ಅವರು ಯುಎನ್​ಜಿಎ ಗಮನಕ್ಕೆ ತಂದರು. ಇದು 12 ವರ್ಷ ಮೇಲ್ಪಟ್ಟ ಯಾರಿಗಾದರೂ ಕೊಡಬಹುದಾಗಿದ್ದು, ಎಮ್​ಆರ್​ಎನ್ಎ ವ್ಯಾಕ್ಸಿನ್​ ಅಭಿವೃದ್ಧಿ ಪಡಿಸುವಿಕೆ ಅಂತಿಮ ಹಂತದಲ್ಲಿದೆ ಎಂಬುದನ್ನೂ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net