ಹಲವೆಡೆ ವರುಣನ ಆರ್ಭಟ; ಬೆಂಗಳೂರಿನಲ್ಲಿ ಮಳೆ ಯಾವಾಗ? ಹವಾಮಾನ ಇಲಾಖೆ ಹೇಳಿದಿಷ್ಟು...

Rain
Published on

ಬೆಂಗಳೂರು: ಬಿಸಿಲ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಯುಗಾದಿ ಮರುದಿನ ಆರಂಭವಾಗಿರುವ ಬೇಸಿಗೆ ಮಳೆ ನಿನ್ನೆ ಇನ್ನಷ್ಟು ಜಿಲ್ಲೆಗಳಿಗೆ ವಿಸ್ತರಿಸಿದೆ. 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೆಲಕಾಲ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಮಳೆರಾಯನ ಸುದ್ದಿಯೆ ಇಲ್ಲದಂತಾಗಿದೆ.

ನಿನ್ನೆ ರಾಯಚೂರು, ಚಿಕ್ಕಮಗಳೂರು, ದಾವಣಗೆರೆ, ಬೀದರ್‌, ವಿಜಯಪುರ, ಯಾದಗಿರಿ, ದಕ್ಷಿಣ ಕನ್ನಡ, ಉಡುಪಿ, ವಿಜಯನಗರ, ಬಳ್ಳಾರಿ, ಹಾವೇರಿ, ಧಾರವಾಡ, ಗದಗ, ಕೊಪ್ಪಳ, ಶಿವಮೊಗ್ಗ ಸೇರಿ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೆಲಕಾಲ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

ಬೆಂಗಳೂರಿನಲ್ಲಿ ಕಳೆದ ವಾರದಲ್ಲಿ ತಾಪಮಾನ ಕಡಿಮೆಯಾಗಿದೆ. ಏಪ್ರಿಲ್ 6 ರಂದು 37.6 ಡಿಗ್ರಿ ಸೆಲ್ಸಿಯಸ್‌ಗೆ ಹೋಲಿಸಿದರೆ, ಏಪ್ರಿಲ್ 13 ರಂದು ಕೇವಲ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರಿನಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಲಿನ ವಾತಾವರಣ ಮುಂದುವರೆಯಲಿದ್ದು, ಏಪ್ರಿಲ್‌ 19ರ ಬಳಿಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಬಿಸಿಲಿನ ಬೇಗೆಗೆ ಬೆಂದು ಬೇಸತ್ತು ಹೋಗಿರುವ ನಗರದ ಜನರು ಮಳೆಗಾಗಿ ಪರಿತಪಿಸುತ್ತಿದ್ದು, ಈ ಭವಿಷ್ಯವಾದರೂ ನಿಜವಾಗಲಿದ್ಯಾ ಎಂದು ಕಾದುನೋಡಬೇಕಿದೆ.

ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ. ಏಪ್ರಿಲ್ 15 ಹಾಗೂ 16ರಂದು ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಅಲ್ಲದೇ ಏಪ್ರಿಲ್‌ 20 ರವರೆಗೂ 25 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಎ.ಪ್ರಸಾದ್ ಮಾತನಾಡಿ, ನಗರದಲ್ಲಿ ನಿರೀಕ್ಷಿತ ಮಳೆ ತುಸು ವಿಳಂಬವಾಗಿದೆ. ಆದರೆ, ಇಲ್ಲಿ ಏಪ್ರಿಲ್‌ನಲ್ಲಿಯೇ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net