

ಮುಂಬೈ: ಕಳೆದ ವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಸುಮಾರು ಶೇ.1ರಷ್ಟು ಏರಿಕೆಯಲ್ಲೇ ವಹಿವಾಟು ಮುಗಿಸಿವೆ. ಮಿಶ್ರ ಮುನ್ಸೂಚನೆಗಳ ನಡುವೆಯೇ ಸತತ ಎರಡನೇ ವಾರವೂ ಷೇರುಪೇಟೆಯಲ್ಲಿ ಪ್ರಗತಿ ಕಂಡುಬಂದಿದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಗೆಲುವು, ಜಾಗತಿಕ ಭೌಗೋಳಿಕ ಪರಿಸ್ಥಿತಿಯಲ್ಲಿ ಸಮತೋಲನ ಮುಂತಾದ ಧನಾತ್ಮಕ ಅಂಶಗಳಿದ್ದರೂ ಷೇರುಪೇಟೆ ಒಮ್ಮೆ ಗಗನದೆತ್ತರಕ್ಕೆ ಏರಿ, ಮತ್ತೊಮ್ಮೆ ಪಾತಾಳಕ್ಕೆ ಬಿದ್ದು ಹೂಡಿಕೆದಾರರನ್ನು ಗೊಂದಲಕ್ಕೀಡು ಮಾಡಿದೆ. ಹಾಗಾದರೆ ಈ ವಾರ ಷೇರುಪೇಟೆಯಲ್ಲಿ ಏನಾಗಬಹುದು? ವಿಶ್ಲೇಷಕರು ಏನು ಹೇಳುತ್ತಾರೆ? ಹೂಡಿಕೆದಾರರು ಗಮನಿಸಬೇಕಾದ 6 ಪ್ರಮುಖ ಅಂಶಗಳು ಯಾವುವು? ಇಲ್ಲಿದೆ ವಿವರ.
1) ದುರ್ಬಲ ಜಿಡಿಪಿ: ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೖೆಮಾಸಿಕ ಅವಧಿಯಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ. 6.5ರಷ್ಟು ಬೆಳವಣಿಗೆ ದಾಖಲಿಸುತ್ತದೆ ಎಂಬ ಆಶಾಭಾವನೆ ಇತ್ತಾದರೂ ಕೇವಲ ಶೇ. 5.4ರಷ್ಟು ವೃದ್ಧಿ ದಾಖಲಿಸಿರುವುದು ಷೇರುಪೇಟೆಯನ್ನು ಮಂದಗತಿಯತ್ತ ಒಯ್ಯುವ ಸಾಧ್ಯತೆ ಇದೆ. ನಿರೀಕ್ಷಿಸಿದ್ದಕ್ಕಿಂತ ಮೊದಲೇ ಬಡ್ಡಿ ದರಗಳನ್ನು ಇಳಿಸಬೇಕಾದ ಅನಿವಾರ್ಯತೆ ಆರ್ಬಿಐಗೆ ಎದುರಾಗಬಹುದು ಎನ್ನುತ್ತಾರೆ ಸ್ವಸ್ತಿಕಾ ಇನ್ವೆಸ್ಟ್ ಸ್ಮಾರ್ಟ್ನ ಸಂಶೋಧನಾ ವಿಭಾಗದ ಮುಖ್ಯಸ್ಥ ಸಂತೋಷ್ ಮೀನಾ.
2) ಬ್ರಿಕ್ಸ್ ಕರೆನ್ಸಿ: ಡಾಲರ್ನ ಪ್ರಾಬಲ್ಯ ಕಡಿಮೆ ಮಾಡಲು ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಸೇರಿದಂತೆ 8 ದೇಶಗಳು (ಬ್ರಿಕ್ಸ್ ಸಮೂಹ) ತಮ್ಮದೇ ಆದ ಕರೆನ್ಸಿ ರೂಪಿಸಿಕೊಳ್ಳುತ್ತಿರುವುದರ ವಿರುದ್ಧ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ ಕಠಿಣ ಶಬ್ದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವುದು ಭಾರತೀಯ ಷೇರುಪೇಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
3) ಆಟೊಮೊಬೈಲ್ಸ್ ಮಾರಾಟ: ಆಟೊಮೊಬೈಲ್ ಕಂಪನಿಗಳ ಮಾಸಿಕ ಮಾರಾಟ ಅಂಕಿಅಂಶಗಳು ಸೋಮವಾರ ಬಿಡುಗಡೆ ಆಗಲಿರುವ ಹಿನ್ನೆಲೆಯಲ್ಲಿ ಅವುಗಳ ಷೇರುಗಳ ಮೇಲೆ ಫೋಕಸ್ ಹೆಚ್ಚಿರುತ್ತದೆ. ಹಬ್ಬ ಮತ್ತು ಮದುವೆ ಸೀಸನ್ ಹಿನ್ನೆಲೆಯಲ್ಲಿ ವಾಹನಗಳ ಮಾರಾಟ ಹೆಚ್ಚಾಗಿರುವ ಸಾಧ್ಯತೆ ಜಾಸ್ತಿ ಇದೆ.
4) ವಿದೇಶಿ ಹೂಡಿಕೆ ಹಿಂತೆಗೆತ: ನವೆಂಬರ್ನಲ್ಲಿ ವಿದೇಶಿ ಹೂಡಿಕೆದಾರರು 26 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಕ್ಟೋಬರ್ಗೆ ಹೋಲಿಸಿದರೆ (94 ಸಾವಿರ ಕೋಟಿ ರೂ.) ಇದು ಕಡಿಮೆ. ‘ಐತಿಹಾಸಿಕವಾಗಿ ನೋಡಿದರೆ ಷೇರು ಮಾರುಕಟ್ಟೆಗೆ ಡಿಸೆಂಬರ್ ತಿಂಗಳು ಒಳ್ಳೆಯದೇ’ ಎನ್ನುತ್ತಾರೆ ಮೀನಾ. ಆರ್ಬಿಐ ನೀತಿ ಡಿ. 6ರಂದು ಪ್ರಕಟವಾಗಲಿದ್ದು, ಬಡ್ಡಿ ದರ ಇಳಿಕೆಯಾಗಲಿದೆಯೇ ಇಲ್ಲವೇ ಎಂಬುದು ಅಂದು ಗೊತ್ತಾಗಲಿದೆ. ಯಥಾಸ್ಥಿತಿಗೆ ಹೆಚ್ಚಿನ ಒಲವು ಕಂಡುಬರುತ್ತಿದ್ದು, ಫೆಬ್ರವರಿಯಲ್ಲಿ ಬಡ್ಡಿ ದರ ಪರಿಷ್ಕರಣೆ ಆಗುವ ಸಾಧ್ಯತೆ ಜಾಸ್ತಿ ಎನ್ನುತ್ತಾರೆ ವಿಶ್ಲೇಷಕರು.
5) ಜಾಗತಿಕ ವಿಷಯಗಳು: ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾ- ಯೂಕ್ರೇನ್, ಇಸ್ರೇಲ್-ಹಿಜ್ಬುಲ್ಲಾ ಮಧ್ಯೆ ಪ್ರಕ್ಷುಬ್ಧತೆ ಸ್ವಲ್ಪ ಕಡಿಮೆಯಾಗುತ್ತಿದೆ.
6) ಕಚ್ಚಾತೈಲ ಬೆಲೆ: ಮಧ್ಯಪ್ರಾಚ್ಯದಲ್ಲಿ ಪ್ರಕ್ಷುಬ್ಧತೆ ಕಡಿಮೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಕಳೆದ ವಾರ ಶೇ. 4ರಷ್ಟು ಕಡಿಮೆಯಾಯಿತು. ಈ ಇಳಿಕೆಯಿಂದ ಭಾರತೀಯ ಕಂಪನಿಗಳ ಕಾರ್ಯಾಚರಣೆ ವೆಚ್ಚ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಜಿಯೋಜಿತ್ನ ವಿನೋದ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ.