

ಆರ್ಥಿಕ ಮುಗ್ಗಟ್ಟು, ಆಂತರಿಕ ಸಂಘರ್ಷ ಹಾಗೂ ಜಾಗತಿಕ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ, ಹೊಸ ನಕಾಶೆ ಬಿಡುಗಡೆ ಮಾಡಿ ಭಾರತದೊಂದಿಗೆ ಮತ್ತೊಂದು ಸುತ್ತಿನ ತಿಕ್ಕಾಟಕ್ಕೆ ಮುಂದಾಗಿದೆ. ಪಾಕ್ ತಂತ್ರದ ಹಿಂದೆ ಚೀನಾದ ಕುತಂತ್ರ ಅಡಗಿರುವುದು ಗುಟ್ಟಿನ ವಿಷಯವೇನಲ್ಲ. ಈ ಬಗ್ಗೆ ವಿವರಣೆ ನೀಡಿದ್ದಾರೆ ರಾಘವ ಶರ್ಮ ನಿಡ್ಲೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದು, ಆ ರಾಜ್ಯ ಮತ್ತು ಲಡಾಖ್ನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ್ದ ಭಾರತ ಸರ್ಕಾರ, 2019ರ ನವೆಂಬರ್ 2ರಂದು ಹೊಸ ನಕಾಶೆಯೊಂದನ್ನು ಬಿಡುಗಡೆ ಮಾಡಿತು. ಇದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಭಾಗ ಮತ್ತು ಗಿಲ್ಗಿಟ್ ಬಲ್ಟಿಸ್ತಾನ ಲಡಾಖ್ ವ್ಯಾಪ್ತಿಯಲ್ಲಿದೆ ಎಂದು ತಿಳಿಸಲಾಗಿತ್ತು. ಸಹಜವಾಗಿಯೇ, ಇದನ್ನು ಪಾಕಿಸ್ತಾನ ವಿರೋಧಿಸಿತು. ಇದಾಗಿ, ಕೆಲ ತಿಂಗಳುಗಳ ಬಳಿಕ ಉತ್ತರಾಖಂಡದ ಪಿತೋರಾಗಢ ಜಿಲ್ಲೆಯ ಲಿಪುಲೇಖ್, ಲಿಫಿಯಾಧುರ ಮತ್ತು ಕಾಲಪಾನಿ ಪ್ರದೇಶಗಳು ತನಗೆ ಸೇರಿದ್ದು ಎಂದು ನೇಪಾಳದ ಕಮ್ಯುನಿಸ್ಟ್ ಸರ್ಕಾರ ಹೊಸ ನಕಾಶೆ ಬಿಡುಗಡೆ ಮಾಡಿತು. ನೇಪಾಳದ ಪ್ರಧಾನಿ, ಕಮ್ಯುನಿಸ್ಟ್ ಪಕ್ಷದ ನಾಯಕ ಕೆ.ಪಿ. ಶರ್ಮ ಓಲಿ ನೇತೃತ್ವದ ಸರ್ಕಾರದ ದುರುದ್ದೇಶದಿಂದಲೇ ಈ ಕ್ರಮ ಕೈಗೊಂಡಿದೆ ಎಂದು ಭಾರತ ಸರ್ಕಾರ ಕಿಡಿ ಕಾರಿತು. ಕಳೆದ ಮಂಗಳವಾರ (ಆರ್ಟಿಕಲ್ 370 ಹಿಂಪಡೆದು ವರ್ಷ ಪೂರ್ಣಗೊಳ್ಳುವ ಒಂದು ದಿನಕ್ಕೆ ಮುನ್ನ) ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನದ ಹೊಸ ನಕಾಶೆ ಬಿಡುಗಡೆಗೊಳಿಸಿದ್ದಾರೆ. ಇದರಲ್ಲಿ ಜಮ್ಮು-ಕಾಶ್ಮೀರ, ಲಡಾಖ್, ಸರ್ ಕ್ರೀಕ್ ಮತ್ತು ಜುನಾಗಢ ಪ್ರದೇಶಗಳು ಪಾಕಿಸ್ತಾನದ ಭಾಗವಾಗಿವೆ ಎಂದು ತಿಳಿಸಲಾಗಿದೆ! ಪಾಕಿಸ್ತಾನ ಮತ್ತು ನೇಪಾಳದ ‘ಮ್ಯಾಪ್ ರಾಜಕೀಯ’ದ ಹಿಂದೆ ಚೀನಾದ ಕಾಣದ ಕೈಗಳು ವ್ಯವಸ್ಥಿತವಾಗಿ ಕೆಲಸ ಮಾಡಿವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ನೇಪಾಳದ ಕಮ್ಯುನಿಸ್ಟ್ ಸರ್ಕಾರ ಚೀನಾ ಪ್ರಧಾನಿ ಕ್ಸಿ ಜಿನ್ಪಿಂಗ್ ತಾಳಕ್ಕೆ ಕುಣಿಯುತ್ತಿರುವುದು ಮತ್ತು ಚೀನಾ-ಪಾಕಿಸ್ತಾನ ರಾಷ್ಟ್ರಗಳು ಭಾರತ ವಿರುದ್ಧದ ‘ಕುತಂತ್ರಗಾರಿಕೆ’ಗಳಿಗೆ ಪರಸ್ಪರ ಅವಲಂಬಿಸಿರುವುದು ಗುಟ್ಟಾಗಿ ಉಳಿದಿಲ್ಲ. ನೇಪಾಳ ಮತ್ತು ಪಾಕಿಸ್ತಾನದ ಕೃತ್ಯಗಳನ್ನು ‘ಮೂರ್ಖತನದ ರಾಜಕೀಯ ನಡೆ’ ಎಂದು ಭಾರತ ಹೀಗಳೆದರೂ, ಇಲ್ಲಿ ಚೀನಾದ ‘ವಿಸõತ ಉದ್ದೇಶ’ವನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕು ಮತ್ತು ಪರಿಗಣಿಸುತ್ತಿದೆ ಕೂಡ. ಭಾರತವನ್ನು ಪ್ರಚೋದಿಸುವ ನಿಟ್ಟಿನಲ್ಲಿ ಈ ಮೂರೂ ರಾಷ್ಟ್ರಗಳ ವರ್ತನೆಗಳು ಒಂದಕ್ಕೊಂದು ಬೆಸೆದುಕೊಂಡಿವೆ.
ಸರ್ ಕ್ರೀಕ್ ಮತ್ತು ಜುನಾಗಢ ವಿವಾದ
ಜಮ್ಮು-ಕಾಶ್ಮೀರ ತನ್ನದೆಂದು ಪಾಕ್ ಹೇಳುತ್ತಿರುವುದು ಹೊಸ ವಿಷಯವೇನಲ್ಲ. ಆದರೆ, ಗುಜರಾತ್ ಗಡಿಭಾಗದ ಜುನಾಗಢ ಮತ್ತು ಮನವದಾರ್ ಗಡಿ ಭಾಗಗಳನ್ನೂ ತನ್ನದೆಂದು ಪಾಕ್ ನಕಾಶೆ ಮೂಲಕ ಸಾರಲು ಹೊರಟಿರುವುದು ಹೊಸ ಚರ್ಚೆಗೆ ಗ್ರಾಸವಾಗಿದೆ. ಗುಜರಾತ್ನ ರಣ್ ಆಫ್ ಕಛ್ನ ಜೌಗು ಪ್ರದೇಶದಲ್ಲಿನ 96 ಕಿಮೀ ಉದ್ದದ ವಿವಾದಿತ ನದೀಮುಖವೇ ಈ ಸರ್ ಕ್ರೀಕ್. ಇದರ ಮೂಲ ಹೆಸರು ಬನ್ ಗಂಗಾ. ನಂತರ ಸರ್ ಕ್ರೀಕ್ ಎಂಬ ಬ್ರಿಟಿಷ್ ಪ್ರತಿನಿಧಿಯ ಹೆಸರನ್ನು ಇಡಲಾಯಿತು. ಕಛ್ ಮತ್ತು ಸಿಂಧ್ ಕಡಲ ಗಡಿರೇಖೆ ಮಧ್ಯೆಯ ಈ ವಿವಾದಿತ ಪ್ರದೇಶ ಸ್ವಾತಂತ್ರ್ಯಕ್ಕೆ ಮುನ್ನ ಬ್ರಿಟಿಷ್ ಇಂಡಿಯಾದ ಬಾಂಬೆ ಪ್ರೆಸಿಡೆನ್ಸಿ ಭಾಗವಾಗಿತ್ತು. 1947ರ ಬಳಿಕ ಸಿಂಧ್ ಪಾಕಿಸ್ತಾನಕ್ಕೆ ಸೇರಿದರೆ, ಕಛ್ನ್ನು ಭಾರತಕ್ಕೆ ಸೇರಿಸಲಾಗಿತ್ತು. ಆದರೆ, ಸಿಂಧ್ ಸರ್ಕಾರ ಮತ್ತು ಕಛ್ನ ರಾಜ ರಾವ್ ಮಹಾರಾಜ್ ನಡುವೆ ಸಹಿ ಹಾಕಲಾದ 1914ರ ಬಾಂಬೆ ಸರ್ಕಾರದ ನಿರ್ಣಯದ ಪ್ರಕಾರ ಇಡೀ ಸರ್ ಕ್ರೀಕ್ ಪ್ರದೇಶ ತನಗೆ ಸೇರಬೇಕು ಎಂದು ಪಾಕಿಸ್ತಾನ ಪ್ರತಿಪಾದಿಸುತ್ತಿದೆ. 1924ರ ಹೊಸ ನಕಾಶೆಯಲ್ಲಿ ನದೀಮುಖದ ಮಧ್ಯಭಾಗದಿಂದ ಗಡಿ ಗುರುತಿಸಲಾಗಿರುವುದನ್ನು ಭಾರತ ಒತ್ತಿಹೇಳಿದ್ದು, ಪಾಕ್ ವಾದ ತಳ್ಳಿಹಾಕುತ್ತಲೇ ಬಂದಿದೆ. ಜಿನೀವಾದಲ್ಲಿ ನಡೆಸಲಾಗಿದ್ದ 1966-69ರ ಕಛ್ ಆರ್ಬಿಟ್ರೇಷನ್ನಲ್ಲಿ (ನ್ಯಾಯಪಂಚಾಯ್ತಿ) ‘ಗುಜರಾತ್ನ ರಣ್ ಮತ್ತು ಅದರ ಜೌಗು ಭೂಮಿಯನ್ನು ಭಾರತಕ್ಕೆ ನೀಡಬೇಕು ಹಾಗೂ ರಣ್ನ ಘನಭೂಮಿ ಪಾಕಿಸ್ತಾನದ ವ್ಯಾಪ್ತಿಗೆ ಬರಲಿದೆ’ ಎಂಬ ನಿರ್ಣಯ ಪ್ರಕಟಿಸಲಾಗಿತ್ತು. ಭಾರತ ವಾದಕ್ಕೆ ಇದೂ ಪ್ರಮುಖ ಆಧಾರ ಎಂಬುದು ಗಮನಾರ್ಹ. ಈ ವಿವಾದಗಳ ಹೊರತಾಗಿ ನೋಡಿದರೆ, ಸರ್ ಕ್ರೀಕ್ ಏಷ್ಯಾದ ಮೀನುಗಾರಿಕಾ ಸಂಪನ್ಮೂಲದ ಅತಿದೊಡ್ಡ ನೆಲೆ ಎಂದು ಗುರುತಿಸಿಕೊಂಡಿದೆ. ಹಾಗೇ, ಸಮುದ್ರದ ಆಳದಲ್ಲಿ ಅಪಾರ ಪ್ರಮಾಣದ ತೈಲ ಮತ್ತು ಅನಿಲ ಸಂಪನ್ಮೂಲಗಳಿರುವ ಸಾಧ್ಯತೆ ಇರುವುದರಿಂದ ಎರಡೂ ದೇಶಗಳಿಗೆ ಇದು ಮಹತ್ವದ ಪ್ರದೇಶ.
ಜುನಾಗಢದ ಮೇಲೆ ಕಣ್ಣು
ಜುನಾಗಢಕ್ಕೆ ಸಂಬಂಧಿಸಿ, 1948ರಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು ಮತ್ತು ಬಹುಪಾಲು ಮಂದಿ ಭಾರತ ಸೇರುವ ಆಶಯ ವ್ಯಕ್ತಪಡಿಸಿದ್ದರು. ಆದರೆ ಪಾಕಿಸ್ತಾನ ಇದಕ್ಕೆ ಒಪ್ಪಿರಲಿಲ್ಲ. ಆರಂಭಿಕ ದಿನಗಳಲ್ಲಿ ಪಾಕಿಸ್ತಾನದಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತಾದರೂ, ನಂತರದ ದಿನಗಳಲ್ಲಿ ವಿವಾದ ತಣ್ಣಗಾಗಿತ್ತು. ಹೀಗಾಗಿ, ಈ ವಿಷಯ ‘ಜಮ್ಮು-ಕಾಶ್ಮೀರ ಮಾದರಿ’ಯ ಬಿಕ್ಕಟ್ಟನ್ನು ಸೃಷ್ಟಿಸಲಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಜುನಾಗಢ ಕಥಿಯಾವಾರ್ ಪ್ರದೇಶದ ಒಂದು ಭಾಗವಾಗಿತ್ತು. ಅಂದಿನ ಜುನಾಗಢದ ರಾಜ ನವಾಬ ಮಹಬತ್ಖಾನ್ ರಸೂಲ್ಖಾಂಜಿ, ಈ ಪ್ರದೇಶ ಭಾರತಕ್ಕೆ ಸೇರಿದರೆ ಮಾತ್ರ ಸರ್ವತೋಮುಖ ಅಭಿವೃದ್ಧಿ ಕಾಣಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ, 1947 ಆಗಸ್ಟ್ 15ಕ್ಕೆ ಜುನಾಗಢವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ತೀರ್ವನಿಸಿದರು. ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಜುನಾಗಢದ ದಿವಾನರನ್ನಾಗಿ ಪಾಕಿಸ್ತಾನದ ಕರಾಚಿ ಮೂಲದ ಮುಸ್ಲಿಂ ಲೀಗ್ ಮುಖಂಡ ಷಾ ನವಾಜ್ ಭುಟ್ಟೋ (ಮಾಜಿ ಪ್ರಧಾನಿ ಜುಲ್ಪಿಕರ್ ಅಲಿ ಭುಟ್ಟೋ ತಂದೆ) ಅವರನ್ನು ನೇಮಕಗೊಳಿಸಲಾಗಿತ್ತು. ಅವರ ಪ್ರಭಾವ ದಿಂದಾಗಿ ನವಾಬ ತನ್ನ ನಿಲುವನ್ನು ಬದಲಿಸಿದ್ದ. ಇದರಿಂದ ಅಸಮಾಧಾನಗೊಂಡ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದು, ‘ಜುನಾಗಢ ಜನರ ತೀರ್ಪನ್ನು ಪಾಲಿಸುವುದು ನಿಮ್ಮ ಕರ್ತವ್ಯ’ ಎಂದು ನೆನಪಿಸಿದರೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಜುನಾಗಢದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಮುಂದಾದ ಭಾರತ, ಸೇನಾ ನಿಯೋಜನೆ ದುಪ್ಪಟ್ಟುಗೊಳಿಸಿತು. ಇದರಿಂದ ಭಯಗೊಂಡ ನವಾಬ, ತನ್ನ ಕುಟುಂಬ ಮತ್ತು ಖಜಾನೆಯೊಂದಿಗೆ ಕರಾಚಿಗೆ ಓಡಿಹೋಗಿದ್ದ. ಈ ಬೆಳವಣಿಗೆ ನಂತರ ಜುನಾಗಢದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು ಮತ್ತು ಕಾನೂನು ಸುವ್ಯವಸ್ಥೆ ಕೈ ಮೀರಿದ ಬಗ್ಗೆ ಪಾಕ್ ಅಧ್ಯಕ್ಷ ಮಹಮ್ಮದ್ ಅಲಿ ಜಿನ್ನಾ ಗಮನಕ್ಕೂ ತರಲಾಯಿತು. ಕೆಲ ದಿನಗಳ ನಂತರ, ಅಲ್ಲಿನ ಮುಸ್ಲಿಮರ ಒತ್ತಾಯದ ಮೇರೆಗೆ ಭಾರತ ಸರ್ಕಾರ ಇಲ್ಲಿನ ಆಡಳಿತ ವಹಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡರು. ಇದಾದ ಒಂದೇ ದಿನದಲ್ಲಿ ಭಾರತ ಸರ್ಕಾರ ಜುನಾಗಢದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಪಾಕ್ ವಿರೋಧ ವ್ಯಕ್ತಪಡಿಸಿ, ಇದು ಹಗೆತನದ ಕ್ರಮ ಎಂದು ಕಿಡಿ ಕಾರಿತು. ಭಾರತ ಕ್ಯಾರೇ ಅನ್ನಲಿಲ್ಲ. ಬದಲಿಗೆ, 1948ರ ಫೆಬ್ರವರಿ ತಿಂಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾಯಿತು. 201457 ನೋಂದಾಯಿತ ಮತದಾರರಲ್ಲಿ 190870 ಮತ ಹಾಕಿದರು. 91 ಮಂದಿ ಮಾತ್ರ ಪಾಕಿಸ್ತಾನಕ್ಕೆ ಸೇರುವುದರ ಪರ ಮತ ಚಲಾಯಿಸಿದ್ದರು. ಜುನಾಗಢ ಸುತ್ತಮುತ್ತಲಿನ ಪ್ರದೇಶಗಳ 31434 ಮಂದಿಯೂ ಮತ ಚಲಾಯಿಸಿದ್ದರು. ಅವರಲ್ಲಿ, 39 ಮಂದಿ ಮಾತ್ರ ಪಾಕ್ಗೆ ಸೇರುವ ಇರಾದೆ ವ್ಯಕ್ತಪಡಿಸಿದರು. ಜುನಾಗಢ ವಿಷಯದಲ್ಲಿ ಭಾರತದೆದುರು ತೀವ್ರ ಮುಖಭಂಗ ಅನುಭವಿಸಿದ ಪಾಕಿಸ್ತಾನ, ಜುನಾಗಢ ಹಿನ್ನಡೆಗೆ ಪ್ರತಿಯಾಗಿ ಕಾಶ್ಮೀರವನ್ನು ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಲು ಮುಂದಾಯಿತು. ನಂತರ ನಡೆದದ್ದೆಲ್ಲವೂ ಇತಿಹಾಸ. ‘ಪಾಕಿಸ್ತಾನದ ಜನರ ಆಶಯದಂತೆ ನಾವು ಹೊಸ ನಕಾಶೆ ಸಿದ್ಧಪಡಿಸಿದ್ದೇವೆ’ ಎಂದು ಪ್ರಧಾನಿ ಇಮ್ರಾನ್ ಖಾನ್ ಸಮರ್ಥಿಸಿಕೊಂಡಿದ್ದಾರೆ.
ಪಾಕ್ ಉದ್ದೇಶವೇನು?
ಕಾಶ್ಮೀರ ವಿವಾದ ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ವಿಚಾರ ಮತ್ತು ಮೂರನೇ ರಾಷ್ಟ್ರದ ಹಸ್ತಕ್ಷೇಪವನ್ನು ಭಾರತ ಎಂದಿಗೂ ಒಪ್ಪಿಲ್ಲ. ಐತಿಹಾಸಿಕ ಶಿಮ್ಲಾ ಒಪ್ಪಂದದಲ್ಲೂ ಕಾಶ್ಮೀರವು ದ್ವಿಪಕ್ಷೀಯ ವಿವಾದ ಎಂಬುದಾಗಿ ಒಪ್ಪಿಕೊಳ್ಳ ಲಾಗಿದೆ. ಹೊಸ ಮ್ಯಾಪ್ನಲ್ಲಿ ಇಡೀ ಜಮ್ಮು-ಕಾಶ್ಮೀರ, ಲಡಾಖ್ನ್ನು ತನ್ನದೆಂದು ಹೇಳಿರುವ ಪಾಕಿಸ್ತಾನ, ಲಡಾಖ್ ಪಕ್ಕದಲ್ಲಿರುವ ಜಮ್ಮು-ಕಾಶ್ಮೀರದ ಪೂರ್ವ ಭಾಗವೊಂದನ್ನು ಮಾತ್ರ ತನ್ನದೆಂದು ಹೇಳಿಕೊಂಡಿಲ್ಲ. ಅಂದರೆ, ಜಮ್ಮು-ಕಾಶ್ಮೀರ ಬಿಕ್ಕಟ್ಟಿನಲ್ಲಿ ಚೀನಾವನ್ನು ಮೂರನೇ ಪಾರ್ಟಿಯನ್ನಾಗಿ ಮಾಡಬೇಕು ಎಂದೇ ಪಾಕಿಸ್ತಾನ ಈ ತಂತ್ರ ಅನುಸರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ, ಪಾಕಿಸ್ತಾನ ಭಾರತದೊಂದಿಗಿನ ಭೌಗೋಳಿಕ ಬಿಕ್ಕಟ್ಟಿಗೆ ಹೊಸ ಆಯಾಮ ನೀಡಲು ಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.