ಗುಜರಾತ್​ನ ಜುನಾಗಢ್​ ತನ್ನದೆನ್ನಲು ಪಾಕಿಸ್ತಾನಕ್ಕೆ ಧೈರ್ಯ ನೀಡಿದ್ದು ಈ ವಿದ್ಯಮಾನ; ಜನರೇ ಬುದ್ಧಿ ಕಲಿಸಿದ್ದು ಹೇಗೆ?

Junagadh
Published on

ನವದೆಹಲಿ: ಇತ್ತೀಚೆಗೆಷ್ಟೇ ಪಾಕಿಸ್ತಾನ ಹೊಸ ಭೌಗೋಳಿಕ ನಕ್ಷೆಯೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅಖಂಡ ಜಮ್ಮು ಕಾಶ್ಮೀರವನ್ನು ತನ್ನದೆಂದು ಹೇಳಿದೆ. ಜತೆಗೆ, ಲಡಾಖ್​, ಸರ್​ ಕ್ರೀಕ್​ (ಸಿಂಧೂ ನದಿ ಜಲಸಂಧಿ) ಹಾಗೂ ಗುಜರಾತ್​ನ ಜುನಾಗಢ್​ವನ್ನು ಸೇರಿಸಿಕೊಂಡಿದೆ.

ಜುನಾಗಢ್​ವನ್ನು ತನ್ನದೆಂದು ಹೇಳಿಕೊಳ್ಳಲು ಪಾಕಿಸ್ತಾನಕ್ಕೆ ಐತಿಹಾಸಿಕ ಹಿನ್ನೆಲೆಯೊಂದಿದೆ. ಹೈದರಾಬಾದ್​ ನಿಜಾಮರಂತೆ ಜುನಾಗಢ್​ ಕೂಡ ಮುಸ್ಲಿಂ ನವಾಬ್​ನ ಆಳ್ವಿಕೆಯಲ್ಲಿತ್ತು.

ಭಾರತದ ವಿಭಜನೆ ಬಳಿಕ ಜುನಾಗಢ್​ ನವಾಬ ಮಹಮ್ಮದ್​ ಮಹಬತ್​ ಖಾಂಜಿ ತನ್ನ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇಪಡೆ ಮಾಡಲು ಮುಂದಾಗಿದ್ದ. ಆದರೆ, ಅಲ್ಲಿನ ಹಿಂದೂಗಳು ಇದನ್ನು ಒಪ್ಪಲಿಲ್ಲ. ಅಲ್ಲದೇ ಹಿಂದು ಬಾಹುಳ್ಯದ ಪ್ರದೇಶ ಪಾಕಿಸ್ತಾನಕ್ಕೆ ಸೇರುವುದು ಭಾರತಕ್ಕೂ ಇಷ್ಟವಿರಲಿಲ್ಲ.

ಹೀಗಾಗಿ ಅಂದಿನ ಪ್ರಧಾನಿ ಜವಾಹರ್​ಲಾಲ್​ ನೆಹರು ಜುನಾಗಢ್​ ಪ್ರದೇಶದಲ್ಲಿ ಜನಮತ ಗಣನೆಗೆ ಮುಂದಾದರು. ಬಹುತೇಕರು ಜುನಾಗಢ್​ ಭಾರತಕ್ಕೆ ಸೇರಬೇಕೆಂದು ಮತ ಚಲಾಯಿಸಿದರೆ, ಪಾಕಿಸ್ತಾನದ ಪರ ನೂರಕ್ಕಿಂತ ಹೆಚ್ಚು ಮತಗಳು ಸಿಕ್ಕವಷ್ಟೇ. ಹೀಗಾಗಿ ಜುನಾಗಢ್​ ಭಾರತದಲ್ಲಿಯೇ ಉಳಿದುಕೊಂಡಿತು.

ಆದರೆ, ಇದನ್ನು ಪಾಕಿಸ್ತಾನ ಒಪ್ಪಲಿಲ್ಲ ಹಾಗೂ 1948ರಲ್ಲಿ ಇದನ್ನು ವಿಶ್ವಸಂಸ್ಥೆಗೆ ಒಯ್ಯಿತು. ಬಳಿಕ ಇದನ್ನು ಎಲ್ಲರೂ ಮರೆತರು. ಮತ್ತೆ ಇದಕ್ಕೆ ಜೀವ ಬಂದಿದ್ದು 2007ರಲ್ಲಿ.

ನವಾಬ್​ ಖಾಂಜಿಯ ವಂಶಸ್ಥ ಹಾಗೂ ಸದ್ಯ ಕರಾಚಿಯಲ್ಲಿರುವ ಮಹಮ್ಮದ್​ ಜಹಾಂಗೀರ್​ ಖಾನ್​ ಎಂಬುವನು ಜುನಾಗಢ್​ ವಿವಾದಕ್ಕೆ ಜೀವ ಕೊಟ್ಟ. ಈತನ ಪ್ರಕಾರ ಅಂತಾರಾಷ್ಟ್ರೀಯ ವಿಯನ್ನಾ ಒಪ್ಪಂದದ ಪ್ರಕಾರ ಜುನಾಗಢ್​ ನವಾಬನ ಆದೇಶ ಇಂದಿಗೂ ಊರ್ಜಿತವಾಗುತ್ತದೆ ಎಂದು ವಾದ ಮಂಡಿಸಿದ್ದಾನೆ.

ಹೀಗಾಗಿ ಪಾಕಿಸ್ತಾನ ಜುನಾಗಢ್​ ತನ್ನದೆಂದು ಹೇಳಿಕೊಳ್ಳಲು ಮುಂದಾಗಿದೆ. ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಇದನ್ನು ರಾಜಕೀಯ ಉದ್ದೇಶಗಳಿಗಾಘಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಇದು ಪಾಕ್​ನಲ್ಲಿ ಭಾರಿ ಪ್ರಚಾರ ಪಡೆದುಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net