

ನಾಮ ಸಂಕೀರ್ತನಂ ಯಸ್ಯ ಸರ್ವಪಾಪ ಪ್ರಣಾಶನಮ್ |
ಪ್ರಣಾಮೋ ದುಃಖ ಶಮನಸ್ತಂ ನಮಾಮಿ ಹರೀಂ ಪರಮ್ ||
ಕಲಿಯುಗದಲ್ಲಿ ನಾಮಸಂಕೀರ್ತನೆಯೇ ಅತ್ಯಂತ ಸುಲಭ ಹಾಗೂ ಖಚಿತವಾದ ಮಾರ್ಗ ಎಂದು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದು ತೋರಿಸಿದವರು ಪರಮಹಂಸ ಭಗವಾನ್ ಶ್ರೀ ರಾಮಕೃಷ್ಣರು. ಪರಮಹಂಸರ ಅದ್ಭುತ ಸುಶ್ರಾವ್ಯ ಕಂಠಸಿರಿಯಿಂದ ಹೊರಬರುತ್ತಿದ್ದ ಗಂಧರ್ವಗಾನ, ಸಂಕೀರ್ತನೆ ಎಂತಹವರಿಗಾದರೂ ಭಗವತ್ಪ್ರೇಮದ ಸಿಂಚನವನ್ನು ನೀಡುತ್ತಿತ್ತು. ರಾಮಕೃಷ್ಣ ವಚನವೇದದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಪರಮಹಂಸರು ನಡೆಸುತ್ತಿದ್ದ ಭಗವತ್ ಸತ್ಸಂಗ. ಈ ಸಂದರ್ಭಗಳಲ್ಲಿ ಎಲ್ಲರೂ ಭಕ್ತಿ ಸಾಗರದಲ್ಲಿ ತೇಲಿ ಮುಳುಗುತ್ತಿದ್ದರು. ಇದಕ್ಕೆ ಮೂಲ ಕಾರಣವೇ ಶುದ್ಧ ಭಕ್ತಿ, ಶುದ್ಧ ಹೃದಯ ಹಾಗೂ ಶುದ್ಧ ಮನಸ್ಸು. ಈ ಮೂರರ ಹಿನ್ನೆಲೆಯಲ್ಲಿ ಮೂಡಿ ಬಂದುದೇ ನಾಮಸಂಕೀರ್ತನೆ. ಸಾಮಾನ್ಯವಾಗಿ ಹರಿನಾಮ ಸಂಕೀರ್ತನೆ, ಶಿವನಾಮ ಸಂಕೀರ್ತನೆ, ದೇವೀ ನಾಮ ಸಂಕೀರ್ತನೆ ಎಂದರೆ ಜೀವಾತ್ಮ ಪರಮಾತ್ಮನ ಮಿಲನ ಹೊಂದುವಂತಹ ಅತ್ಯದ್ಭುತ, ಅನಿರ್ವಚನೀಯ ಆನಂದ ಸಾಗರದಲ್ಲಿ ಮಿಂದಂತಿರಬೇಕು. ಕೇವಲ ತೋರ್ಪಡಿಕೆ, ಮೋಜು, ಸಂತೋಷಕೂಟವಾಗಬಾರದು. ಭಗವದ್ ಸಂಕೀರ್ತನೆ ಕ್ಷಣಿಕ ಆನಂದವಲ್ಲ, ಬದಲಾಗಿ ದೈವ್ವತ್ವದೆಡೆಗೆ ಸಂಪೂರ್ಣ ಶರಣಾಗತಿ ಹೊಂದಿ ಬ್ರಹ್ಮಾನಂದದ ಅನುಭವ ಪಡೆಯುವ ಒಂದು ಪ್ರಕ್ರಿಯೆ.
ಈ ಭಗವನ್ನಾಮ ಸಂಕೀರ್ತನೆಯಿಂದಲೇ ಭಾರತೀಯ ಸನಾತನ ಧರ್ಮದ ಪರಂಪರೆಯಲ್ಲಿ ಭಕ್ತೆ ಮೀರಾ, ಅನ್ನಮಾಚಾರ್ಯ, ದಾಸವರೇಣ್ಯರು, ತುಲಸೀದಾಸರು, ಕಬೀರದಾಸರು, ಗುರುನಾನಕ್, ತ್ಯಾಗರಾಜರು, ದೀಕ್ಷಿತರು, ಭಾಗವತರು, ಅಕ್ಕಮಹಾದೇವಿ ಇತ್ಯಾದಿ ಭಕ್ತಾಗ್ರಣ್ಯರು ಅದ್ಭುತ ಲಾಭವನ್ನು ತೋರಿಸಿಕೊಟ್ಟಿರುತ್ತಾರೆ. ಕೇವಲ ಭಯಾನಕ ಕರ್ಕಶ ಹಾಗೂ ತಾಮಸಿಕ ರೀತಿಯ ವ್ಯವಹಾರದಲ್ಲಿ ಬದಲಾಗಿ ಭಗವದ್ ಚಿಂತನೆ, ಭಗವದಾನಂದ, ಬ್ರಹ್ಮಾನಂದದ ಸವಿರುಚಿಯನ್ನು ಈ ಜಗತ್ತಿಗೆ ತಮ್ಮ ಜೀವನದಲ್ಲಿಯೇ ಅವರೆಲ್ಲ ಅನುಷ್ಠಾನಕ್ಕೆ ತಂದು ತೋರಿಸಿದ್ದಾರೆ. ಆದರೆ ಈಗ ಆಧುನಿಕ ಕಾಲದ ಚಕ್ರದಲ್ಲಿ ಸಿಲುಕಿ ಮನಸ್ಸು, ಹೃದಯ ಮತ್ತು ಶುದ್ಧ ಭಕ್ತಿ ಎಂಬ ಸದ್ವಿಚಾರಗಳೇ ವಿರಳವಾಗುತ್ತಿವೆ. ದಾಸವರೇಣ್ಯರ ಶುದ್ಧ, ಸರಳ, ಭಾವಪೂರ್ಣ, ಸ್ವರಪೂರ್ಣ ಎಲ್ಲದಕ್ಕಿಂತ ಮಿಗಿಲಾಗಿ ಭಗವದ್ ಸಮರ್ಪಣಾಭಾವದಿಂದ ಹೊರಹೊಮ್ಮಿದ ಕೀರ್ತನೆಗಳು, ಸ್ತುತಿಗಳು, ಉಗಾಭೋಗಗಳು ಹಾಡುಗಾರರ ಹಾಗೂ ಕೇಳುಗರ ಆತ್ಮ ಶುದ್ಧಿಯಾಗಿಸಿ ಅನಿರ್ವಚನೀಯ ಆನಂದ ಭಾವವನ್ನು ತರುತ್ತಿದ್ದವು.
ಈ ನಿಜವಾದ ನಾಮ ಸಂಕೀರ್ತನೆಯ ಅನುಭವವನ್ನು ಪರಮಹಂಸರ ಜೀವನ ಗಂಗೆಯಲ್ಲಿ ಪ್ರತಿ ಕ್ಷಣ, ಪ್ರತಿ ಹಂತದಲ್ಲಿ ಕಾಣಬಹುದಾಗಿದೆ. ಈ ಅಂಶವನ್ನು ವಿವರಿಸುವ ಈ ಅದ್ಭುತ ನಾಮ ಸಂಕೀರ್ತನಾ ಸತ್ಸಂಗದ ಒಂದು ತುಣುಕನ್ನು ಇಲ್ಲಿ ವಿವರಿಸಲಾಗಿದೆ. ಇದೇ ಸರಿಯಾದ, ನಿಜವಾದ ಅರ್ಥದಲ್ಲಿ ಭಗವನ್ನಾಮ ಸಂಕೀರ್ತನೆ.
ಅದೊಂದು ಭಕ್ತರ ಸಮಾವೇಶ, ಭಕ್ತನೊಬ್ಬ ಪರಮಹಂಸರಿಗೆ ಅತ್ಯಂತ ನಮ್ರತೆಯಿಂದ ಒಂದು ನಾಮ ಸಂಕೀರ್ತನೆ ನಡೆಸಿಕೊಡಿ ಎಂದು ಪ್ರಾರ್ಥಿಸುತ್ತಾನೆ. ಆಗ ಪರಮಹಂಸರು ತಮ್ಮ ಸುಮಧುರ ಕಂಠದಿಂದ ಭಗವತಿಯ ಸಂಬಂಧವಾಗಿ ಹಾಡಲು ಆರಂಭಿಸಿದರು. ‘ಅಂತರಂಗದಲಿ ಶ್ರೀ ಘನಶ್ಯಾಮೆಯ ಆದರಿಸು ಮನವೇ...ಎಂತಹ ಅದ್ಭುತವಾದ ಹಾಡು!
ಪರಮಹಂಸರು ದೇವದೇವಿಯರ ನಾಮ ಸಂಕೀರ್ತನೆ ಮಾಡುತ್ತಿದ್ದಾರೆ. ಭಕ್ತರೆಲ್ಲರೂ ತಾವು ಕುಳಿತಲ್ಲಿಯೇ ಕುಳಿತು ಅದನ್ನು ಕೇಳುತ್ತಿದ್ದಾರೆ. ಅವರು ಇಂದಿನಂಥ ಮಧುಮಯ ನಾಮಸಂಕೀರ್ತನೆಯನ್ನು ಎಂದೂ ಕೇಳಿರಲಿಲ್ಲ. ಅಮೃತದ ವರ್ಷಧಾರೆಯಾಗುತ್ತಿದೆಯೊ ಏನೊ ಎಂಬಂತಿತ್ತು. ಪರಮಹಂಸರು ನಾಮಸಂಕೀರ್ತನೆಯನ್ನು ಮುಗಿಸಿ ಪ್ರಾರ್ಥನೆ ಮಾಡಲಾರಂಭಿಸಿದ್ದಾರೆ. ಸಾಕ್ಷಾತ್ ಭಗವಂತನೇ, ಯಾವ ರೀತಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಪರಮಹಂಸರ ಮೂಲಕ ತೋರಿಸುತ್ತಿರುವನೊ ಏನೊ ಎಂಬಂತಿತ್ತು. ‘ಹೇ ತಾಯೆ, ನಾನು ನಿನ್ನಲ್ಲಿ ಶರಣಾಗತನಾಗಿದ್ದೇನೆ. ನನಗೆ ದೇಹಸುಖ ಬೇಡ ತಾಯೆ; ಲೋಕಮಾನ್ಯತೆ ಬೇಡ; ಅಣಿಮಾದಿ ಅಷ್ಟಸಿದ್ಧಿಗಳು ಬೇಡ ತಾಯೆ; ಕೇವಲ ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧಭಕ್ತಿ ಉಂಟಾಗುವಂತೆ ಕೃಪೆ ಮಾಡು’. ಪರಮಹಂಸರ ಆಂತರ್ಯದಿಂದ ಬಂದ ಈ ಪ್ರಾರ್ಥನೆಯ ಪ್ರತಿಯೊಂದು ಪದವೂ ಭಕ್ತಿಯ ಮನಗಳನ್ನು ಪುನರುಜ್ಜೀವನಗೊಳಿಸಿಬಿಟ್ಟಿತು. ಹೀಗೆ ಹೃದಯದ ಮಂದಿರದಲ್ಲಿ ಭಗವದ್ ಶಕ್ತಿಯನ್ನಿರಿಸಿ ತನ್ಮೂಲಕ ಮಾನಸ ಪೂಜೆಯನ್ನು ಸಲ್ಲಿಸುವಂತಾಗಬೇಕು. ಆ ಆನಂದದ ರಸಾಮೃತದಲ್ಲಿ ಸರ್ವಸ್ವವನ್ನು ಮರೆತು ಕೇವಲ ಜೀವಾತ್ಮ-ಪರಮಾತ್ಮನ ಮಿಲನ ಹೊಂದುವ ಪರಿಸರ ನಿರ್ವಣವಾಗಬೇಕು. ಅದೇ ನಿಜವಾದ ಅರ್ಥದಲ್ಲಿ ಭಗವನ್ನಾಮ ಸಂಕೀರ್ತನೆ.
(ಪ್ರತಿಕ್ರಿಯಿಸಿ: vvsudina@gmail.com, swajapa@gmail.com)
(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)