ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡ ಸಿಎಂ ಇಬ್ರಾಹಿಂ ಮುಂದಿನ ನಡೆ ಏನು?

CM Ibrahim
Published on

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಜತೆ ಜೆಡಿಎಸ್​ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ, ಪ್ರತ್ಯೇಕ ಸಭೆ ನಡೆಸುವುದರೊಂದಿಗೆ ತೀವ್ರ ಅಸಮಾಧಾನ ಹೊರಹಾಕಿದ್ದ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದಿಂದ ಇಂದು ಉಚ್ಛಾಟನೆ ಮಾಡಲಾಗಿದೆ.

ಇಂದು ನಡೆದ ಜೆಡಿಎಸ್​ ಕೋರ್ ಕಮಿಟಿ ಸಭೆಯಲ್ಲಿ ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಜೆಡಿಎಸ್​ ಪಕ್ಷದ ರಾಜ್ಯ ಘಟಕ‌ವನ್ನೇ ವಿಸರ್ಜಿಸಿ ಹೊಸ ಅಡಾಕ್​ ಕಮಿಟಿ ರಚನೆ ಮಾಡಿದ ಹಿನ್ನೆಲೆಯಲ್ಲಿ ಇಬ್ರಾಹಿಂ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.

ಜೆಡಿಎಸ್​-ಬಿಜೆಪಿ ಮೈತ್ರಿ ಘೋಷಣೆಯಾದ ಬಳಿಕ ಇಬ್ರಾಹಿಂ ನೀಡಿದ್ದ ಹೇಳಿಕೆಗಳು ಪಕ್ಷಕ್ಕೆ ಇರುಸು-ಮುರುಸು ತಂದಿತ್ತು. ತಮ್ಮ ಬೆಂಬಲಿಗರ ಸಭೆಯನ್ನು ನಡೆಸಿ, ನಮ್ಮದೇ ಒರಿಜಿನಲ್​ ಜೆಡಿಎಸ್​ ಎಂದಿದ್ದರು. ರಾಜ್ಯಾಧ್ಯಕ್ಷನಾಗಿದ್ದರೂ ನನ್ನ ಗಮನಕ್ಕೆ ತರದೇ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದರು. ಇಂಡಿಯಾ ಒಕ್ಕೂಟಕ್ಕೆ ನನ್ನ ಬೆಂಬಲ ಎಂದು ನೇರವಾಗಿಯೇ ಹೇಳಿಕೆ ನೀಡಿದ್ದರು. ಇದರ ನಡುವೆ ಎಚ್​ಡಿಕೆ ಮತ್ತು ನಿಖಿಲ್​ ಕುಮಾಸ್ವಾಮಿ ಅವರನ್ನು ಇಬ್ರಾಹಿಂ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ ಎಂಬ ಪತ್ರವೂ ವೈರಲ್​ ಆಗಿತ್ತು. ಆದರೆ, ಅದು ನಕಲಿ ಪತ್ರ ಎಂದು ಹೇಳಿ ಸ್ವತಃ ಇಬ್ರಾಹಿಂ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು.

ಈ ಎಲ್ಲ ಬೆಳವಣಿಗೆಗಳ ಬಳಿಕ ಇಂದು ನಡೆದ ಕೋರ್​ ಕಮಿಯ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ. ದೇವೇಗೌಡ ಅವರು ಎಲ್ಲರ ಒಪ್ಪಿಗೆಯನ್ನು ಪಡೆದು ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್​ಡಿಡಿ, ಹಿಂದಿನ ಅಧ್ಯಕ್ಷರು ಏನು ಹೇಳಿದ್ದಾರೋ ಅದನ್ನು ನಾನಿಲ್ಲಿ ಪ್ರಸ್ತಾಪ ಮಾಡುವುದಿಲ್ಲ. ನಾವು ಬಿಜೆಪಿ ಜತೆ ಹೋಗುವುದಕ್ಕೆ ಕಾರಣ ಯಾರು? ಎಂದು ಪ್ರಶ್ನಿಸುವ ಮೂಲಕ ಇಬ್ರಾಹಿಂಗೆ ಟಾಂಗ್​ ಕೊಟ್ಟರು. ಈಗಲೂ ಸಾಕಷ್ಟು ಯುವ ಮುಸ್ಲಿಂ ಮುಖಂಡರು ನಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದರು.

ಇಬ್ರಾಹಿಂಗಿರುವ ಮುಂದಿನ‌ ಮಾರ್ಗಗಳೇನು?

ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡಿರುವ ಸಿಎಂ ಇಬ್ರಾಹಿಂ ಮುಂದಿರುವ ಮಾರ್ಗಗಳೇನು ಎಂಬ ಪ್ರಶ್ನೆ ಇದೀಗ ಮೂಡಿದೆ. ಮೊದಲನೆಯದಾಗಿ ಪಕ್ಷದ ಸದಸ್ಯತ್ವವನ್ನು ಒಪ್ಪಿಕೊಂಡು‌ ಪಕ್ಷದಲ್ಲೇ ಮುಂದುವರಿಯಬಹುದು ಅಥವಾ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬರಬಹುದು. ಒಂದು ವೇಳೆ ಪಕ್ಷದಿಂದ ಹೊರಬಂದರೆ ಬೇರೆ ಪಕ್ಷ ಸೇರಲು ಅವರಿಗೆ ಅವಕಾಶ ಸೃಷ್ಟಿಯಾಗುತ್ತದೆ. ಮರಳಿ ಕಾಂಗ್ರೆಸ್​ ಸೇರಿದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ, ಈಗಾಗಲೇ ಇಂಡಿಯಾ ಒಕ್ಕೂಟದ ಪರ ಇಬ್ರಾಹಿಂ ಬ್ಯಾಟ್​ ಬೀಸಿದ್ದಾರೆ. ಇದ್ಯಾವುದನ್ನು ಮಾಡದೇ ರಾಜಕೀಯ ಸಾಕು ಅಂತ ರಾಜಕೀಯ ನಿವೃತ್ತಿಯನ್ನೂ ಘೋಷಿಸಬಹುದು. ಹೀಗಾಗಿ ಇಬ್ರಾಹಿಂ ಅವರು ಸದ್ಯದ ಬೆಳವಣಿಗೆ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ? ಅವರು ಮುಂದಿನ ನಡೆ ಹೇಗಿರಲಿದೆ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮೂಡಿದೆ.

ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರಿದ್ದ ಇಬ್ರಾಹಿಂ ಅವರಿಗೆ ಜೆಡಿಎಸ್​ ರಾಜ್ಯಾಧ್ಯಕ್ಷ ಪಟ್ಟವನ್ನು ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net