

ಪ್ರಧಾನಿ ನರೇಂದ್ರ ಮೋದಿ ಭಾನುವಾರ ನವದೆಹಲಿಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಮಹಿಳೆಯರು, ರೈತರು, ಯುವಕರು, ಹಿರಿಯ ನಾಗರಿಕರು ಸೇರಿದಂತೆ ಹಲವು ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದು, ಏನೆಲ್ಲ ಭರವಸೆ ನೀಡಲಾಗಿದೆ ಎಂಬುದರ ವಿವರ ಇಲ್ಲಿದೆ.
ನಿಮಗೆ ಬೇಕಾದ ದವಸಧಾನ್ಯ ನಾವು ಕೊಡುತ್ತೇವೆ. ನೀವು ಹಸಿದಿರಬಾರದು; ನಮಗೆ ಅದು ಮುಖ್ಯ ಎಂದು ಮೋದಿ ಅವರು 5 ವರ್ಷ 80 ಕೋಟಿ ಜನರಿಗೆ ಅನ್ನಭಾಗ್ಯ ನೀಡಿದ್ದಾರೆ. ಅಡುಗೆಗೆ ಎಲ್ಪಿಜಿ ಗ್ಯಾಸ್ ನೀಡಿದ್ದಾರೆ. ‘ಅನಾರೋಗ್ಯವಾದರೆ ನಾನಿದ್ದೇನೆ’ ಎಂದು ಆಯುಷ್ಮಾನ್ ಭಾರತ ನೀಡಿದ್ದಾರೆ. 70 ವರ್ಷ ದಾಟಿದವರಿಗೆ ಈ ಆರೋಗ್ಯಭಾಗ್ಯ ವಿಸ್ತರಿಸಿದ್ದಾರೆ.
ಮತ್ತೊಂದು ಮಹಾನ್ ಯೋಜನೆ ಎಂದರೆ ಸೌರಭಾಗ್ಯ. ಸೌರಶಕ್ತಿ ಮೂಲಕ ಮನೆಮನೆಗೆ ವಿದ್ಯುತ್ ಭಾಗ್ಯ ನೀಡುತ್ತಾರೆ ಅವರು. ಅವರು ಹೇಳಿದ್ದನ್ನು ಈವರೆಗೆ ಮಾಡಿದ್ದಾರೆ. ಇದನ್ನೂ ಮಾಡುತ್ತಾರೆ. ಆ ಗ್ಯಾರಂಟಿ ನಮ್ಮ ಜನರಲ್ಲಿದೆ. ಮನೆಮನೆಗೆ ವಿದ್ಯುತ್ ಎಂಬುದರ ಅರ್ಥ ದೊಡ್ಡದಿದೆ. ಇಲ್ಲಿ ನಿಮ್ಮ ಖರ್ಚನ್ನು ಉಳಿಸುವುದರ ಮೂಲಕ ನಿಮಗೆ ಹಣವನ್ನು ಪ್ರತಿ ತಿಂಗಳೂ ಸಿಗುವಂತೆ ಮಾಡಿರುವುದು ಮೋದಿ ಬುದ್ಧಿವಂತಿಕೆ ಮಾತ್ರವಲ್ಲ, ಉತ್ತಮ ಆರ್ಥಿಕ ನೀತಿ ಇಲ್ಲಿದೆ.
ನಿಮ್ಮ ಜೇಬಿನಲ್ಲಿ ಹಣ ಉಳಿಸುವ ಬುದ್ಧಿವಂತಿಕೆ ಇದು. ಇಲ್ಲಿ ಸೋರಿಕೆ ಇಲ್ಲ; ಮನೆಮನಗೆ ಉಳಿತಾಯ ಹೋಗುತ್ತದೆ. ರಾಜ್ಯ ಸರ್ಕಾರಗಳು ವಿದ್ಯುತ್ ಖರೀದಿಸಿ ಮನೆಮನೆಗೆ ನೀಡುತ್ತವೆ. ಇದೊಂದು ದೊಡ್ಡ ಅವ್ಯವಹಾರದ ಹುತ್ತ. ಪೂರೈಕೆಯಲ್ಲಿ ಮೋಸ, ಖರೀದಿಯಲ್ಲಿ ಮೋಸ, ಗೃಹಸೌರ ವಿದ್ಯುತ್ ಭಾಗ್ಯದಿಂದ ರಾಜ್ಯ ಸರ್ಕಾರಗಳು ಸಾಲ ಮಾಡುವುದು ಕಡಿಮೆ ಆಗುತ್ತದೆ. ಬಡ್ಡಿ ಖರ್ಚು ಇಳಿಯುತ್ತದೆ. ರಾಜ್ಯ ಬಜೆಟ್ನ ಆರೋಗ್ಯ ಉತ್ತಮ ಆಗುತ್ತದೆ.
ಮುಖ್ಯವಾದ ವಿಚಾರ ಅಂದರೆ ದುಡಿಮೆಗೆ ಹಳ್ಳಿಗಾಡಿನಲ್ಲೇ ಹೆಚ್ಚು ದಾರಿಗೆ ಅವಕಾಶ ನೀಡುವುದು. ಹಲವು ದಾರಿಗಳಲ್ಲಿ ಹಳ್ಳಿಗರಿಗೆ ಪಶುಪಾಲನೆ ಇತ್ಯಾದಿಗಳ ಮೂಲಕ ಹೆಚ್ಚು ಹಣ ನೀಡುವುದು ಉತ್ತಮ ಉದ್ದೇಶವಾಗಿದೆ. ‘ನೀವು ದುಡಿಯಿರಿ. ಉಳಿದವರಿಗೂ ದುಡಿಮೆಗೆ ನೀವು ಹಾದಿ ತೋರಿ. ನಾವು ದುಡ್ಡು ಕೊಡುತ್ತೇವೆ’- ಇದು ಉದ್ಯೋಗಮಂತ್ರವಾಗಿದೆ. ಮೋದಿ ಸಂಕಲ್ಪಪತ್ರದಲ್ಲಿ ಜನರ ಬದುಕಿಗೆ ಸುರಕ್ಷಾಚಕ್ರವಾಗುವುದು ಭಾಜಪ ಸಂಕಲ್ಪಪತ್ರದ ಸ್ಪಷ್ಟ ಉದ್ದೇಶ. ಇದು ಮಾತ್ರವಲ್ಲ, ಆಂತರಿಕ ಶತ್ರುಗಳು ಹಾಗೂ ಬಾಹ್ಯ ಶತ್ರುಗಳು ಯಾರೇ ಇದ್ದರೂ ಅಂಥ ಶಕ್ತಿಗಳನ್ನು ಬಗ್ಗುಬಡಿಯುತ್ತೇವೆ ಎಂಬುದರ ಮೂಲಕ ದೇಶಕ್ಕೆ ಮೋದಿ ಸುರಕ್ಷಾ ಚಕ್ರ ಇದೆ ಎಂಬುದನ್ನು ಸ್ಪಷ್ಟವಾಗಿ ಇಲ್ಲಿ ತಿಳಿಸಲಾಗಿದೆ. ದೇಶದ ಸುರಕ್ಷಾ ಚಕ್ರದ ಮಾತು ಭಾಜಪ ಮಾತ್ರ ಆಡಬಹುದು. ಉಳಿದ ಪಕ್ಷಗಳಲ್ಲಿ ಅಂಥ ಲಕ್ಷ್ಯವೂ ಇಲ್ಲ. ಮನಸ್ಸು ಇಲ್ಲ.