ಮಾನಿತ್ವ ಎಂದರೇನು?

1-683747f3744ee
Published on
ನಮ್ಮ ಮನಸ್ಸು ಯಾವಾಗಲೂ ತಾನು ಎಲ್ಲರಿಗಿಂತ ಶ್ರೇಷ್ಠನಾಗಬೇಕು ಎಂಬಂತೆ ಬಯಸುತ್ತದೆ. ಇದನ್ನೇ ಶ್ರೀಕೃಷ್ಣ ಪರಮಾತ್ಮನು ಮಾನಿತ್ವ ವೆಂದು ಕರೆದಿದ್ದಾನೆ. ಈ ಮಾನಿತ್ವವು ನಮ್ಮ ಭಾಷೆಯಲ್ಲಿ, ದೇಶದಲ್ಲಿ, ರೂಪದಲ್ಲಿ, ವಿದ್ಯೆಯಲ್ಲಿ, ಜಾತಿಯಲ್ಲಿ, ಕೆಲಸದಲ್ಲಿ ಹಾಗೂ ಇನ್ನೂ ಅನೇಕ ಕಡೆಗಳಲ್ಲಿ ಕಂಡುಬರುತ್ತದೆ.

ಇದಕ್ಕೆ ಮೂಲಕಾರಣ ಸತ್ಯದ ಅರಿವು ನಮಗಿಲ್ಲದಿರುವುದು ಮತ್ತು ಅಜ್ಞಾನ. ಪಾಂಡವರು ಮತ್ತು ಕೌರವರಿಗೆ ಗುರುಗಳು ದ್ರೋಣಾಚಾರ್ಯರು. ವಿದ್ಯಾಭ್ಯಾಸವಾದ ಮೇಲೆ ಗುರು ದಕ್ಷಿಣೆಯನ್ನು ಸಮರ್ಪಿಸಲು ಅವರು ಬಂದಾಗ ಆಚಾರ್ಯರು ತಮ್ಮ ಹಾಗೂ ದ್ರುಪದನ ಸ್ನೇಹ ಹಾಗೂ ದ್ವೇಷದ ವೃತ್ತಾಂತವನ್ನು ತಿಳಿಸಿ ದ್ರುಪದನನ್ನು ಯುದ್ಧದಲ್ಲಿ ಸೋಲಿಸಿ ತಮ್ಮ ಪಾದದಡಿಯಲ್ಲಿ ಬೀಳುವಂತೆ ಮಾಡಿದರೆ ಅದೇ ನಿಮ್ಮ ಗುರುದಕ್ಷಿಣೆ ಎನ್ನುತ್ತಾರೆ.

ಅರ್ಜುನನು ಆಚಾರ್ಯರ ಆಸೆಯನ್ನು ಪೂರ್ಣಗೊಳಿಸುತ್ತಾನೆ. ಆಗ ದ್ರೋಣರು ದ್ರುಪದನಿಗೆ ‘ಈಗ ಪೂರ್ತಿ ರಾಜ್ಯ ನನ್ನದಾಯಿತು. ಆದರೂ ನೀನು ನನ್ನ ಮಿತ್ರ. ನಿನಗೆ ನನ್ನ ರಾಜ್ಯದಲ್ಲಿ ಅರ್ಧವನ್ನು ಕೊಡುತ್ತೇನೆ’ ಎಂದು ಕಳುಹಿಸುತ್ತಾರೆ. ಅವಮಾನಗೊಂಡ ದ್ರುಪದ ಸುಮ್ಮನಿರದೆ ಒಂದು ಯಾಗವನ್ನು ಮಾಡಲು ಸಂಕಲ್ಪಿಸುತ್ತಾನೆ. ಆತನ ಆಸೆ ದ್ರೋಣನನ್ನು ಕೊಲ್ಲುವ ಒಬ್ಬ ಮಗ ಹಾಗೂ ಅರ್ಜುನನಿಗೆ ಕೊಟ್ಟು ವಿವಾಹಮಾಡಲು ಒಬ್ಬ ಮಗಳು ಜನಿಸಬೇಕು ಎಂಬುದಾಗಿರುತ್ತದೆ. ಯಾಗ ಫಲಪ್ರದವಾಗುತ್ತದೆ.

ದ್ರುಪದ ತನ್ನ ಮಗನಾದ ದ್ರಷ್ಟದ್ಯುಮ್ನ ನನ್ನು ದ್ರೋಣರ ಬಳಿಗೆ ಕಳುಹಿಸುತ್ತಾನೆ. ದ್ರುಪದನ ಮನಸ್ಸನ್ನು ಅರಿತಿದ್ದ ದ್ರೋಣರು ಆತನ ಮಗನಿಗೆ ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ಕೊನೆಯಲ್ಲಿ ಶಿಷ್ಯನೇ ಗುರುವನ್ನು ಕುರುಕ್ಷೇತ್ರದಲ್ಲಿ ಸಂಹರಿಸುತ್ತಾನೆ. ಇಲ್ಲಿ ನಾವು ಮಾನಿತ್ವದ ಉದಾಹರಣೆಯನ್ನು ಕಾಣುತ್ತೇವೆ. ದ್ರೋಣರಲ್ಲೂ ಮಾನಿತ್ವವು ಕಾಣುತ್ತದೆ, ದ್ರುಪದನಲ್ಲೂ ಇದು ಸ್ಪಷ್ಟವಾಗಿ ಗೋಚರವಾಗು ತ್ತದೆ. ಅದರ ಫಲ ಮರಣ. ನಮ್ಮ ಹಿರಿಯರು ಜ್ಞಾನಿಗಳು ಇದನ್ನರಿತು ನಮಗೆ ಶ್ರದ್ಧೆ, ಗೌರವ ಮುಂತಾದ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಹೇಳುತ್ತಾರೆ. ಜ್ಞಾನಿಗಳು ಮಾನಿತ್ವದ ಪ್ರದರ್ಶನ ಮಾಡುವುದಿಲ್ಲ. ಎಲ್ಲಾ ತಿಳಿದಿದ್ದರೂ ಏನೂ ತಿಳಿಯದ ಹಾಗೆ ವರ್ತಿಸುತ್ತಾರೆ. ಜ್ಞಾನ ಗುರು- ಹಿರಿಯರಿಂದ ಬಂದಿದ್ದು ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net