ಎಂಎಲ್​ಸಿ ಸಂಬಂಧಿ ಪಿಸ್ತೂಲ್ ಹಿಡಿದು ಮಾಡಿದ್ದೇನು?​; ಹುಟ್ಟುಹಬ್ಬದ ಮಧ್ಯೆ ಒಂದು ಸಾವು!

shootout
Published on

ಲಖನೌ: ಅದು ಎಂಎಲ್​ಸಿ ಒಬ್ಬರ ಮನೆ. ಅಲ್ಲಿ ಅದ್ದೂರಿಯಾಗಿ ಆಚರಣೆ ಆಗುತ್ತಿದ್ದ ಹುಟ್ಟುಹಬ್ಬ. ಹುಟ್ಟಿದ್ದಕ್ಕೇ ಹಬ್ಬದಂತಿದ್ದ ಆ ಮನೆಯ ಆವರಣದಲ್ಲಿ ಇದ್ದಕ್ಕಿದ್ದಂತೆ ಸಾವಿನ ಶೋಕ. ಅದಕ್ಕೆಲ್ಲ ಕಾರಣ ಅಲ್ಲಿ ಸಿಡಿದ ಗುಂಡು!

ಹೌದು.. ವಿಧಾನಪರಿಷತ್ ಸದಸ್ಯರೊಬ್ಬರ ಮನೆಯಲ್ಲಿ ಆಯೋಜಿಸಲಾಗಿದ್ದ ಹುಟ್ಟುಹಬ್ಬದಲ್ಲಿ ಆ ವ್ಯಕ್ತಿ ತನ್ನ ಕೈಯಲ್ಲಿದ್ದ ಕಂಟ್ರಿಮೇಡ್​ ಪಿಸ್ತೂಲ್​ ಹಿಡಿದು ತೋರಿಸಿದ್ದಷ್ಟೇ, ಒಬ್ಬ ಹೆಣವಾಗಿ ಮಲಗಿಬಿಟ್ಟ.

ಅಷ್ಟಕ್ಕೂ ಇಷ್ಟೆಲ್ಲ ಸಂಭವಿಸಿದ್ದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಎಂಎಲ್​ಸಿ ಅಮಿತ್ ಯಾದವ್ ಅವರ ಮನೆಯಲ್ಲಿ. ಅವರ ಸಂಬಂಧಿ ಪಂಕಜ್​ ಯಾದವ್ ಅವರ ಸ್ನೇಹಿತ ವಿನಯ್ ಯಾದವ್ ಅವರ ಜನ್ಮದಿನವನ್ನು ಶುಕ್ರವಾರ ರಾತ್ರಿ ಆ ಮನೆಯಲ್ಲಿ ಆಯೋಜಿಸಲಾಗಿತ್ತು.

ಅಲ್ಲಿ ಐವರು ಸೇರಿ ಆಚರಿಸುತ್ತಿದ್ದ ಜನ್ಮದಿನಾಚರಣೆ ಸಂದರ್ಭ ಪಂಕಜ್ ಯಾದವ್ ತನ್ನ ಬಳಿ ಇರುವ ಕಂಟ್ರಿಮೇಡ್ ಪಿಸ್ತೂಲ್ಅನ್ನು ಗೆಳೆಯರಿಗೆ ತೋರಿಸುತ್ತಿದ್ದಾಗ ಅಕಸ್ಮಾತ್ ಆಗಿ ಅದರಿಂದ ಗುಂಡು ಚಿಮ್ಮಿದೆ. ಪರಿಣಾಮ, ಅಲ್ಲಿದ್ದ ರಾಕೇಶ್ ರಾವತ್ ಎಂಬಾತ ಸಾವಿಗೀಡಾಗಿದ್ದಾನೆ.

ಪ್ರಕರಣ ಸಂಬಂಧ ಅಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಗನ್​ ಪಂಕಜ್​ಗೆ ಸೇರಿದ್ದು, ಅದರ ಮ್ಯಾಗಜಿನ್​ ಹಾಗೂ 3 ಕಾರ್ಟ್​ರಿಜ್​ಗಳನ್ನು ಕೂಡ ವಶಪಡಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸೋಮನ್ ವರ್ಮಾ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net